ಕೆನಡಾ | ಭಾರತದ ಹೈಕಮಿಷನರ್ ಸಭೆಗೆ ಅಡ್ಡಿಪಡಿಸುವುದಾಗಿ ಎಸ್ಎಫ್ಜೆ ಬೆದರಿಕೆ
Photo: ANI file photo
ಒಟ್ಟಾವ : ಕೆನಡಾಕ್ಕೆ ಭಾರತದ ಹೈಕಮಿಷನರ್ ಸಂಜಯ್ ಕುಮಾರ್ ವರ್ಮ ಮಾರ್ಚ್ 1ರಂದು ಕೆನಡಾದ ಬ್ರಿಟಿಷ್ ಕೊಲಂಬಿಯಾ ಮತ್ತು ಸರ್ರೆಗೆ ಭೇಟಿ ನೀಡುವ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವುದಾಗಿ ಖಾಲಿಸ್ತಾನ್ ಪರ ಸಂಘಟನೆ `ಸಿಖ್ಸ್ ಫಾರ್ ಜಸ್ಟಿಸ್(ಎಸ್ಎಫ್ಜೆ) ಬೆದರಿಕೆ ಒಡ್ಡಿದೆ.
ಕಳೆದ ವರ್ಷದ ಜೂನ್ನಲ್ಲಿ ಸಿಖ್ ಪ್ರತ್ಯೇಕತಾವಾದಿ ಮುಖಂಡ ಹರ್ದೀಪ್ ಸಿಂಗ್ ನಿಜ್ಜಾರ್ ಸರ್ರೆಯಲ್ಲಿ ಹತನಾದ ಬಳಿಕ ಭಾರತದ ರಾಜತಾಂತ್ರಿಕ ಅಧಿಕಾರಿ ಅಲ್ಲಿಗೆ ನೀಡುತ್ತಿರುವ ಪ್ರಥಮ ಭೇಟಿ ಇದಾಗಿದೆ. ಬ್ರಿಟಿಷ್ ಕೊಲಂಬಿಯಾದ ಭೇಟಿಯ ಸಂದರ್ಭ ಅವರು ಆ ಪ್ರಾಂತದ ರಾಜಧಾನಿ ವಿಕ್ಟೋರಿಯಾ, ವ್ಯಾಂಕೋವರ್ ಮತ್ತು ಸರ್ರೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲದೆ ಸರ್ರೆಯ ಮೇಯರ್ ಬ್ರೆಂಡಾ ಲೋಕ್ ಹಾಗೂ ಅಲ್ಲಿನ ವ್ಯಾಪಾರ ಸಂಘಟನೆಯ ಜತೆಗಿನ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
`ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆ ಪ್ರಕರಣದಲ್ಲಿ ಭಾರತದ ಕೈವಾಡವಿದೆ. ಆದ್ದರಿಂದ ಖಾಲಿಸ್ತಾನ್ ಪರ ಸಿಖ್ಖರಿಗೆ ಮಾರ್ಚ್ 1ರಂದು ಭಾರತದ ಹೈಕಮಿಷನರ್ರನ್ನು ನೇರವಾಗಿ ಗುರಿಯಾಗಿಸಿ ಪ್ರಶ್ನೆಗಳನ್ನು ಕೇಳುವ ಮತ್ತು ಸವಾಲು ಹಾಕುವ ಅವಕಾಶವಿದೆ. ಜತೆಗೆ ಸರ್ರೆಯಲ್ಲಿ ಪ್ರತಿಭಟನೆಯನ್ನೂ ಹಮ್ಮಿಕೊಳ್ಳಲಾಗಿದೆ' ಎಂದು ಎಸ್ಎಫ್ಜೆಯ ಪ್ರಧಾನ ಸಲಹೆಗಾರ ಗುರುಪತ್ವಂತ್ ಸಿಂಗ್ ಪನ್ನೂನ್ ಹೇಳಿರುವುದಾಗಿ ವರದಿಯಾಗಿದೆ. ಈ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಸಂಜಯ್ ವರ್ಮ `ಎಸ್ಎಫ್ಜೆ ಯನ್ನು ಭಾರತದ `ಕಾನೂನುಬಾಹಿರ ಕೃತ್ಯ ತಡೆ ಕಾಯ್ದೆ'ಯಡಿ ನಿಷೇಧಿಸಿರುವುದು ನಿಮಗೆಲ್ಲಾ ತಿಳಿದಿದೆ. ಭಾರತ-ಕೆನಡಾ ನಡುವಿನ ಸೌಹಾರ್ದಯುತ ದ್ವಿಪಕ್ಷೀಯ ಸಂಬಂಧವನ್ನು ಹಾಳುಮಾಡುವುದು ಇದರ ಪ್ರಮುಖ ಉದ್ದೇಶವಾಗಿದೆ. ಭಾರತದ ರಾಜತಾಂತ್ರಿಕ ಅಧಿಕಾರಿಗಳನ್ನು ಬೆದರಿಸುವ ಕೃತ್ಯವನ್ನು ಪನ್ನೂನ್ ದೀರ್ಘ ಕಾಲದಿಂದ ನಡೆಸುತ್ತಿದ್ದಾನೆ. ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗದಿರುವುದರಿಂದ ಆತ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಈ ರೀತಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾನೆ' ಎಂದಿದ್ದಾರೆ.