ಕೆನಡಾ: ಪನ್ನೂನ್ ಆಪ್ತನ ಮನೆಯ ಮೇಲೆ ಗುಂಡಿನ ದಾಳಿ
ಗುರುಪತ್ವಂತ್ ಸಿಂಗ್ ಪನ್ನೂನ್ (Photo: NDTV)
ಟೊರಂಟೊ : ಖಾಲಿಸ್ತಾನ್ ಪ್ರತ್ಯೇಕತಾವಾದಿ ಮುಖಂಡ ಗುರುಪತ್ವಂತ್ ಸಿಂಗ್ ಪನ್ನೂನ್ ಆಪ್ತನ ಮನೆಯ ಮೇಲೆ ಸೋಮವಾರ ಬೆಳಿಗ್ಗೆ ಗುಂಡಿನ ದಾಳಿ ನಡೆದಿದೆ ಎಂದು ಕೆನಡಾ ಪೊಲೀಸರು ಹೇಳಿದ್ದಾರೆ.
ಕೆನಡಾದ ಗ್ರೇಟರ್ ಟೊರಂಟೊ ಪ್ರದೇಶದ ಬ್ರಾಂಪ್ಟನ್ ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಯ ಮೇಲೆ ಗುಂಡಿನ ದಾಳಿ ನಡೆದಿದೆ. ಪನ್ನೂನ್ ನಿಕಟವರ್ತಿ, ಸಿಖ್ಸ್ ಫಾರ್ ಜಸ್ಟಿಸ್(ಎಸ್ಎಫ್ಜೆ) ಕಾರ್ಯಕರ್ತ ಇಂದರ್ಜಿತ್ ಸಿಂಗ್ ಗೊಸಾಲ್ಗೆ ಸೇರಿದ ಮನೆ ಇದಾಗಿದೆ. ಹರ್ದೀಪ್ ಸಿಂಗ್ ನಿಜ್ಜಾರ್ ಜೂನ್ 18ರಂದು ಹತನಾದ ಬಳಿಕ ಎಸ್ಎಫ್ಜೆ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿರುವ ಇಂದರ್ಜಿತ್ ಸಿಂಗ್, ಸೆಪ್ಟಂಬರ್ 23ರಂದು ಬ್ರಿಟಿಷ್ ಕೊಲಂಬಿಯಾದ ಸರ್ರೆ ನಗರದಲ್ಲಿ `ಖಾಲಿಸ್ತಾನ್ ಜನಮತ ಸಂಗ್ರಹ' ಕಾರ್ಯಕ್ರಮ ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮತ್ತು ಫೆಬ್ರವರಿ 17ರಂದು ಟೊರಂಟೊದಲ್ಲಿರುವ ಭಾರತೀಯ ಕಾನ್ಸುಲೇಟ್ ಕಚೇರಿಯೆದುರು ಪ್ರತಿಭಟನೆಗೆ ಕರೆ ನೀಡಿರುವುದಾಗಿ ವರದಿಯಾಗಿದೆ.
ಎಸ್ಎಫ್ಜೆ ಪರ ಸಕ್ರಿಯವಾಗಿ ಕೆಲಸ ಮಾಡುತ್ತಿರುವ ತನ್ನನ್ನು, ನಿಜ್ಜಾರ್ ಹತ್ಯೆಯ ರೀತಿಯಲ್ಲೇ ಮುಗಿಸಿಬಿಡಲು ಭಾರತದ ಏಜೆಂಟರು ಪ್ರಯತ್ನಿಸುತ್ತಿದ್ದಾರೆ ಎಂದು ಇಂದರ್ಜಿತ್ ಸಿಂಗ್ ಆರೋಪಿಸಿದ್ದಾರೆ.