ಭಾರತ-ಕೆನಡಾ ರಾಜತಾಂತ್ರಿಕ ಉದ್ವಿಗ್ನತೆ | ಆರೆಸ್ಸೆಸ್ ನಿಷೇಧ ಹಾಗೂ ಭಾರತದ ಮೇಲೆ ರಾಜತಾಂತ್ರಿಕ ದಿಗ್ಬಂಧನಕ್ಕೆ ಆಗ್ರಹಿಸಿದ ಕೆನಡಾ ಸಿಖ್ ರಾಜಕಾರಣಿ
PC : ANI
ಒಟ್ಟಾವಾ: ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯ ನಂತರ ಭಾರತ ಮತ್ತು ಕೆನಡಾ ರಾಜತಾಂತ್ರಿಕ ಸಂಬಂಧಗಳು ಬಿಗಡಾಯಿಸುತ್ತಾ ಸಾಗಿದ್ದು, ಭಾರತದ ಮೇಲೆ ರಾಜತಾಂತ್ರಿಕ ದಿಗ್ಬಂಧನ ವಿಧಿಸಬೇಕು ಹಾಗೂ ಕೆನಡಾದಲ್ಲಿನ ಆರೆಸ್ಸೆಸ್ ಜಾಲದ ಮೇಲೆ ನಿಷೇಧ ಹೇರಬೇಕು ಎಂದು ಸೋಮವಾರ ಕೆನಡಿಯನ್ ನ್ಯೂ ಡೆಮಾಕ್ರಟಿಕ್ ಪಕ್ಷದ ನಾಯಕ ಜಗ್ಮೀತ್ ಸಿಂಗ್ ಆಗ್ರಹಿಸಿದ್ದಾರೆ.
ಈ ಹಿಂದೆ ಪ್ರಧಾನಿ ಜಸ್ಟಿನ್ ಟ್ರೂಡೊ ಅವರ ಮಿತ್ರಪಕ್ಷವಾಗಿದ್ದ ಕೆನಡಿಯನ್ ನ್ಯೂ ಡೆಮಾಕ್ರಟಿಕ್ ಪಕ್ಷದ ನಾಯಕ ಜಗ್ಮೀತ್ ಸಿಂಗ್, ಕೆನಡಾದಲ್ಲಿನ ಸಿಖ್ ಸಮುದಾಯದ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಕೆನಡಾದಿಂದ ಭಾರತೀಯ ರಾಜತಾಂತ್ರಿಕರ ಉಚ್ಚಾಟನೆಯನ್ನು ಬೆಂಬಲಿಸಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಜಗ್ಮೀತ್ ಸಿಂಗ್, ಈ ಬಗ್ಗೆ ನಿರ್ಣಾಯಕ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. “ಇಂದು ಭಾರತೀಯ ರಾಜತಾಂತ್ರಿಕರನ್ನು ಉಚ್ಚಾಟಿಸಿರುವ ನಿರ್ಧಾರವನ್ನು ನಾವು ಬೆಂಬಲಿಸುತ್ತೇವೆ ಹಾಗೂ ಭಾರತದ ಮೇಲೆ ರಾಜತಾಂತ್ರಿಕ ದಿಗ್ಬಂಧನವನ್ನು ವಿಧಿಸಬೇಕು ಮತ್ತು ಕೆನಡಾದಲ್ಲಿ ಆರೆಸ್ಸೆಸ್ ಜಾಲದ ಮೇಲೆ ನಿಷೇಧ ಹೇರಬೇಕು ಎಂದು ಕೆನಡಾ ಸರಕಾರವನ್ನು ಆಗ್ರಹಿಸುತ್ತೇವೆ. ಕೆನಡಾ ನೆಲದಲ್ಲಿ ಸಂಘಟಿತ ಅಪರಾಧ ಎಸಗುವ ಯಾರೇ ಆದರೂ ತೀವ್ರ ಸ್ವರೂಪದ ಪರಿಣಾಮವನ್ನು ಎದುರಿಸುವಂತೆ ಕ್ರಮ ಕೈಗೊಳ್ಳಲು ಬದ್ಧವಾಗಬೇಕು ಎಂದು ಒತ್ತಾಯಿಸುತ್ತೇವೆ” ಎಂದು ಹೇಳಿದ್ದಾರೆ.
ಸಿಖ್ ಸಮುದಾಯದ ಮೇಲೆ ಹೆಚ್ಚುತ್ತಿರುವ ಬೆದರಿಕೆ, ಕಿರುಕುಳ ಮತ್ತು ಹಿಂಸಾಚಾರವನ್ನು ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸರು ಬಿಡುಗಡೆ ಮಾಡಿರುವ ವರದಿಯಲ್ಲಿ ಎತ್ತಿ ತೋರಿಸಿರುವ ಬೆನ್ನಿಗೇ ಜಗ್ಮೀತ್ ಸಿಂಗ್ ರಿಂದ ಈ ಹೇಳಿಕೆ ಹೊರ ಬಿದ್ದಿದೆ. ಈ ವರದಿಯಲ್ಲಿ ತೀವ್ರವಾದಿಗಳು, ಭಾರತ ಸರಕಾರದ ಏಜೆಂಟರು ಹಾಗೂ ನರಹಂತಕರ ನಡುವಿನ ಸಂಪರ್ಕಗಳು ಹಾಗೂ ಕೆನಡಾ ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳಲ್ಲಿನ ಹಸ್ತಕ್ಷೇಪದ ಕುರಿತು ಒತ್ತಿ ಹೇಳಲಾಗಿದೆ.