ಕೆನಡಾ ಈಗಲೂ ಭಾರತದೊಂದಿಗೆ ನಿಕಟ ಬಾಂಧವ್ಯ ಬಯಸುತ್ತದೆ: ಜಸ್ಟಿನ್ ಟ್ರುಡೊ
ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಜೊತೆ ಪ್ರಧಾನಿ ನರೇಂದ್ರ ಮೋದಿ (File Photo: PTI)
ಮಾಂಟ್ರಿಯಲ್: ಖಾಲಿಸ್ತಾನಿ ಮುಖಂಡ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂಬ ವಿಶ್ವಾಸಾರ್ಹ ಸಾಕ್ಷ್ಯವಿದ್ದರೂ, ಕೆನಡಾ ಸರ್ಕಾರವು ಭಾರತದೊಂದಿಗೆ ನಿಕಟ ಬಾಂಧವ್ಯ ಹೊಂದಲು ಬಯಸುತ್ತದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿದ್ದಾರೆ ಎಂದು ಕೆನಡಾ ಮೂಲದ National Post ಸುದ್ದಿ ಸಂಸ್ಥೆ ವರದಿ ಮಾಡಿದೆ.
ಗುರುವಾರ ಮಾಂಟ್ರಿಯಲ್ನಲ್ಲಿ ಸುದ್ದಿ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, "ಭಾರತದ ಪ್ರಭಾವವು ವಿಶ್ವದಾದ್ಯಂತ ಹರಡುತ್ತಿರುವ ಹೊತ್ತಿನಲ್ಲಿ ಕೆನಡಾ ಮತ್ತು ಮಿತ್ರ ರಾಷ್ಟ್ರಗಳು ಭಾರತದೊಂದಿಗೆ ನಿಕಟ ಸಂಬಂಧ ಹೊಂದಿರುವುದು ಅತಿ ಮುಖ್ಯವಾಗಿದೆ" ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಬ್ರಿಟಿಷ್ ಕೊಲಂಬಿಯಾದಲ್ಲಿ ಜೂನ್ 18ರಂದು ನಡೆದ ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಭಾರತೀಯ ಏಜೆಂಟರು ಷಾಮೀಲಾಗಿರುವ ಸಾಧ್ಯತೆ ಇದೆ ಎಂದು ಕೆನಡಾ ಪ್ರಧಾನಿ ಆರೋಪ ಮಾಡಿರುವುದು ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಹದಗೆಡಲು ಕಾರಣವಾಗಿತ್ತು. ಭಾರತ 2020ರಲ್ಲಿ ನಿಜ್ಜರ್ ನನ್ನು ಉಗ್ರಗಾಮಿ ಎಂದು ಘೋಷಿಸಿತ್ತು.
ಕೆನಡಾ ಪ್ರಧಾನಿ ಹೇಳಿಕೆಯನ್ನು ಭಾರತ 'ಅರ್ಥಹೀನ' ಮತ್ತು 'ದುರುದ್ದೇಶಪೂರಿತ' ಎಂದು ತಿರಸ್ಕರಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ರಾಜತಾಂತ್ರಿಕ ಅಧಿಕಾರಿಯನ್ನು ಉಚ್ಚಾಟಿಸಿದ ಕ್ರಮಕ್ಕೆ ಪ್ರತೀಕಾರವಾಗಿ ಕೆನಡಾ ರಾಜತಾಂತ್ರಿಕ ಅಧಿಕಾರಿಯನ್ನು ಭಾರತ ಉಚ್ಚಾಟಿಸಿತ್ತು.