ಕೆನಡಾ: ವಲಸೆ ನೀತಿ ಬದಲಾವಣೆ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ
PC : PTI
ಒಟ್ಟಾವ: ದೇಶದ ವಲಸೆ ನೀತಿಯಲ್ಲಿ ಇತ್ತೀಚೆಗೆ ಮಾಡಿರುವ ಬದಲಾವಣೆಯನ್ನು ವಿರೋಧಿಸಿ ಕೆನಡಾದಲ್ಲಿ ನೂರಾರು ಭಾರತೀಯ ವಿದ್ಯಾರ್ಥಿಗಳು ಬುಧವಾರ ಬೀದಿಗಿಳಿದು ಪ್ರತಿಭಟನೆ ನಡೆಸಿರುವುದಾಗಿ ವರದಿಯಾಗಿದೆ.
ವಲಸೆ ನೀತಿಯಲ್ಲಿನ ಬದಲಾವಣೆಯಿಂದ ವಿದೇಶದ ವಿದ್ಯಾರ್ಥಿಗಳು ಗಡೀಪಾರು ಭೀತಿಗೆ ಒಳಗಾಗಿದ್ದಾರೆ. ಕೆನಡಾದ್ಯಂತ 70,000ಕ್ಕೂ ಹೆಚ್ಚು ಅಂತರಾಷ್ಟ್ರೀಯ ವಿದ್ಯಾರ್ಥಿಗಳು ಫೆಡರಲ್ ನೀತಿ ಬದಲಾವಣೆಯನ್ನು ವಿರೋಧಿಸಿ ರಸ್ತೆಗಿಳಿದು ಪ್ರತಿಭಟಿಸಿದ್ದಾರೆ. ಪ್ರಧಾನ ಮಂತ್ರಿ ಜಸ್ಟಿನ್ ಟ್ರೂಡೊ ಸರಕಾರ ಘೋಷಿಸಿದ ಹೊಸ ಬದಲಾವಣೆಗಳ ಅಡಿಯಲ್ಲಿ ಅಧ್ಯಯನ ಪರವಾನಗಿ(ಸ್ಟಡಿ ಪರ್ಮಿಟ್)ಗಳ ಮೇಲಿನ ನಿರ್ಬಂಧ ಸೇರಿದಂತೆ ಈ ವಿದ್ಯಾರ್ಥಿಗಳನ್ನು ಗಡೀಪಾರು ಮಾಡುವ ಅಪಾಯವನ್ನು ಹೆಚ್ಚಿಸಿದೆ. ನೀತಿಗಳಲ್ಲಿನ ಬದಲಾವಣೆಯು ಈ ವಿದ್ಯಾರ್ಥಿಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ತಮ್ಮ ಅಧ್ಯಯನ ಪೂರ್ಣಗೊಳಿಸಿದ ಬಳಿಕ ಕಾಯಂ ನಿವಾಸಿಗಳ ಸ್ಥಾನಮಾನಕ್ಕೆ ಅರ್ಜಿ ಸಲ್ಲಿಸಲು ಬಯಸುವವರಿಗೆ ಈ ನೀತಿಯಿಂದ ಸಮಸ್ಯೆಯಾಗಲಿದೆ. ಹೊಸ ಪ್ರಾಂತೀಯ ನೀತಿಗಳು ಕಾಯಂ ರೆಸಿಡೆನ್ಸಿ ನಾಮನಿರ್ದೇಶನಗಳಲ್ಲಿ 25% ಕಡಿತಕ್ಕೆ ಕರೆ ನೀಡುವುದರಿಂದ ಹಲವು ವಿದ್ಯಾರ್ಥಿಗಳು ಗಡೀಪಾರಾಗುವ ಅಪಾಯ ಎದುರಿಸಲಿದ್ದಾರೆ ಎಂದು `ಸಿಟಿ ನ್ಯೂಸ್ ಟೊರಂಟೊ' ವರದಿ ಮಾಡಿದೆ.
2022ರಲ್ಲಿ ಮಾಡಿದ್ದ ವಿಸ್ತರಣೆಗಳಿಗೆ ವ್ಯತಿರಿಕ್ತವಾಗಿ, ತಾತ್ಕಾಲಿಕ ವಿದೇಶಿ ಉದ್ಯೋಗಿಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆಗೊಳಿಸುವುದಾಗಿ ಸೋಮವಾರ ಕೆನಡಾ ಸರಕಾರ ಘೋಷಿಸಿತ್ತು. ತಾತ್ಕಾಲಿಕ ನಿವಾಸಿಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಟ್ರೂಡೊ ಸರಕಾರ ಈ ಕ್ರಮ ಕೈಗೊಂಡಿದೆ.