ಸಂಶೋಧನಾ ನಿಧಿಯ ಮೇಲೆ ನಿರ್ಬಂಧ ಘೋಷಿಸಿದ ಕೆನಡಾ
Photo : freepik
ಒಟ್ಟಾವ: ಚೀನಾ, ಇರಾನ್ ಮತ್ತು ರಶ್ಯದೊಂದಿಗೆ ಡೇಟಾಗಳನ್ನು ಹಂಚಿಕೊಳ್ಳುವುದನ್ನು ತಡೆಯುವ ನಿಟ್ಟಿನಲ್ಲಿ ಸಂಶೋಧನಾ ನಿಧಿಯ ಮೇಲೆ ನಿರ್ಬಂಧಗಳನ್ನು ಕೆನಡಾ ಸರಕಾರ ಮಂಗಳವಾರ ಘೋಷಿಸಿದೆ.
ಕೆನಡಾದ ವಿವಿಗಳು ಅಭಿವೃದ್ಧಿಪಡಿಸಿರುವ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದು ರಾಷ್ಟ್ರೀಯ ಭದ್ರತೆಯ ಮೇಲೆ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಕೃತಕ ಬುದ್ಧಿಮತ್ತೆ(ಎಐ), ಕ್ವಾಂಟಮ್ ವಿಜ್ಞಾನ, ರೊಬೊಟ್ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಬಾಹ್ಯಾಕಾಶ ಮತ್ತು ಉಪಗ್ರಹ ತಂತ್ರಜ್ಞಾನ, ಮಾನವ- ಯಂತ್ರ ಸಂಯೋಜನೆ ಮುಂತಾದ ಸೂಕ್ಷ್ಮ ಸಂಶೋಧನೆಗಳ ಪಟ್ಟಿಯನ್ನು `ಹಂಚಿಕೊಳ್ಳಲಾಗದ ಡೇಟಾ' ಪಟ್ಟಿಗೆ ಸೇರಿಸಲಾಗಿದೆ ಎಂದು ಸರಕಾರ ಹೇಳಿದೆ.
`ಕೆನಡಾದ ಸಂಶೋಧನೆಯು ಆವಿಷ್ಕಾರದ ಮುಂಚೂಣಿಯಲ್ಲಿದೆ. ಆದರೆ ಅದನ್ನು ಮುಕ್ತವಾಗಿಸಿದರೆ ವಿದೇಶಿ ಪ್ರಭಾವಕ್ಕೆ ಗುರಿಯಾಗಿಸಬಹುದು ಮತ್ತು ರಾಷ್ಟ್ರೀಯ ಭದ್ರತೆಗೆ ಹಾನಿಯಾಗುವ ರೀತಿಯಲ್ಲಿ ದುರುಪಯೋಗವಾಗುವ ಸಂಭಾವ್ಯ ಅಪಾಯವನ್ನು ಹೆಚ್ಚಿಸಲಿದೆ' ಎಂದು ಕೆನಡಾದ ಆವಿಷ್ಕಾರ ಇಲಾಖೆಯ ಸಚಿವ ಫ್ರಾಂಕೋಯಿಸ್ ಫಿಲಿಪ್ ಹೇಳಿದ್ದಾರೆ. ಚೀನಾ ಹಾಗೂ ಇತರ ಕೆಲವು ದೇಶಗಳು ಜಂಟಿ ಶೈಕ್ಷಣಿಕ ಸಂಶೋಧನಾ ಪಾಲುದಾರಿಕೆಯನ್ನು ಬಳಸಿಕೊಂಡು ಅತ್ಯಾಧುನಿಕ ತಂತ್ರಜ್ಞಾನಗಳ ಮಾಹಿತಿ ಪಡೆದು ಅದನ್ನು ಆರ್ಥಿಕ ಮತ್ತು ಮಿಲಿಟರಿ ಕ್ಷೇತ್ರಕ್ಕೆ ಬಳಸಿಕೊಳ್ಳುತ್ತಿವೆ ಎಂದು ಕೆನಡಾದ ಭದ್ರತಾ ಗುಪ್ತಚರ ಸೇವಾ ಇಲಾಖೆ ಇತ್ತೀಚೆಗೆ ಎಚ್ಚರಿಕೆ ನೀಡಿತ್ತು. ಕೆನಡಾದ 50 ವಿಶ್ವವಿದ್ಯಾಲಯದ ಸಂಶೋಧಕರು ಚೀನಾದ ಮಿಲಿಟರಿಗೆ ಸಂಬಂಧಿಸಿದ ವಿಜ್ಞಾನಿಗಳೊಂದಿಗೆ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.