ಕೆನಡಾ ಸರಕಾರದ ವಿದೇಶಿ ಕಾರ್ಮಿಕರ ಯೋಜನೆ `ಸಮಕಾಲೀನ ಗುಲಾಮಗಿರಿ' : ವಿಶ್ವಸಂಸ್ಥೆ ಖಂಡನೆ
ಟೊರಂಟೊ : ವ್ಯಾಪಕ ಟೀಕೆಗೆ ಗುರಿಯಾಗಿರುವ ಕೆನಡಾದ ತಾತ್ಕಾಲಿಕ ವಿದೇಶಿ ಕಾರ್ಮಿಕರ ಯೋಜನೆಯು `ಗುಲಾಮಗಿರಿಯ ಸಮಕಾಲೀನ ರೂಪಗಳಿಗೆ ಬೀಜಬಿತ್ತುವ ನೆಲವಾಗಿದೆ' ಎಂದು ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಖಂಡಿಸಿದ್ದಾರೆ
ವಿದೇಶಿ ಕಾರ್ಮಿಕರ ಯೋಜನೆಯು ಉದ್ಯೋಗದಾತರಿಗೆ ಅನುಕೂಲವಾಗುವ ಮತ್ತು ಕಾರ್ಮಿಕರು ತಮ್ಮ ಹಕ್ಕುಗಳನ್ನು ಚಲಾಯಿಸುವುದನ್ನು ತಡೆಯುವ ಅಸಮತೋಲನವನ್ನು ಸಾಂಸ್ಥಿಕಗೊಳಿಸುತ್ತದೆ ಎಂದು `ಸಮಕಾಲೀನ ಗುಲಾಮಗಿರಿಯ ರೂಪಗಳು: ಅದಕ್ಕೆ ಕಾರಣ ಹಾಗೂ ಪರಿಣಾಮಗಳು' ಎಂಬ ವರದಿಯಲ್ಲಿ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಟೊಮೊಯ ಒಬೊಕಟ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಜಸ್ಟಿನ್ ಟ್ರೂಡೊ ಅವರ ಅಧಿಕಾರಾವಧಿಯಲ್ಲಿ ಗರಿಷ್ಟ ಮಟ್ಟ ತಲುಪಿರುವ ಈ ಯೋಜನೆಯಡಿ ಕಡಿಮೆ ವೇತನದ ಕಾರ್ಮಿಕರನ್ನು ನೇಮಿಸಿಕೊಳ್ಳುವ ಮೂಲಕ ಕೆನಡಾ ಪ್ರಜೆಗಳಿಗೆ ಉದ್ಯೋಗಾವಕಾಶ ನಷ್ಟದ ಜತೆಗೆ ಅವರ ಆದಾಯದಲ್ಲೂ ನಷ್ಟವಾಗುತ್ತಿದೆ ಎಂದು ವ್ಯಾಪಕ ಟೀಕೆ ವ್ಯಕ್ತವಾಗಿದೆ.
ನಮ್ಮ ಯುವಜನತೆಗೆ ನಿರುದ್ಯೋಗದ ಸಮಸ್ಯೆ ಹೆಚ್ಚಿರುವಾಗ ಆಡಳಿತಾರೂಢ ಲಿಬರಲ್ ಪಕ್ಷ ಹಾಗೂ ಅದರ ಮಿತ್ರಪಕ್ಷ ನ್ಯೂ ಡೆಮಕ್ರಾಟಿಕ್ ಪಕ್ಷ(ಎನ್‍ಡಿಪಿ)ವು ಬಡ ದೇಶಗಳ ಕಾರ್ಮಿಕರಿಗೆ ಕಡಿಮೆ ವೇತನ ನೀಡಿ ನೇಮಕ ಮಾಡಿಕೊಳ್ಳಲು ಬೃಹತ್ ಕಾರ್ಪೊರೇಟ್ ಸಂಸ್ಥೆಗಳಿಗೆ ಅವಕಾಶ ಮಾಡಿಕೊಟ್ಟಿದೆ. ಲಿಬರಲ್ ಪಕ್ಷದ ಮುಖಂಡ ಟ್ರೂಡೊ ಮತ್ತು ಎನ್‍ಡಿಪಿ ಮುಖಂಡ ಜಗ್‍ಮೀತ್ ಸಿಂಗ್ ಅವರ ಹೇಳಿಕೆಗಳಲ್ಲಿ ಸತ್ಯಾಂಶವಿಲ್ಲ. ಇವರಿಬ್ಬರು ಸೇರಿಕೊಂಡು ತಮ್ಮ ಕಾರ್ಪೊರೇಟ್ ಮಿತ್ರರಿಗೆ ಲಾಭ ಮಾಡಿಕೊಡಲು ನಮ್ಮ ಯುವಜನರನ್ನು ದೋಚಿದ್ದಾರೆ' ಎಂದು ವಿಪಕ್ಷ ಮುಖಂಡ ಪಿಯರೆ ಪೊಲಿಯೆವ್ರೆ ಟೀಕಿಸಿದ್ದಾರೆ.
ಕೆನಡಾದ ವಲಸೆ, ನಿರಾಶ್ರಿತರು ಮತ್ತು ಪೌರತ್ವ ಇಲಾಖೆಯ ಅಂಕಿ ಅಂಶದ ಪ್ರಕಾರ, 2023ರಲ್ಲಿ ಈ ಯೋಜನೆಯಡಿ 1,83,760 ಪರ್ಮಿಟ್ ದಾರರಿದ್ದರು. ಇದರಲ್ಲಿ 28,215 ಭಾರತೀಯರು. ಈ ವರ್ಷದ ಜೂನ್‍ವರೆಗೆ 1,09,840 ಪರ್ಮಿಟ್ ದಾರರಿದ್ದು ಇದರಲ್ಲಿ 17,095 ಭಾರತೀಯರು. ಟ್ರೂಡೊ ಸರಕಾರಕ್ಕಿಂತ ಮೊದಲಿನ ಅವಧಿಯಲ್ಲಿ ಈ ಪ್ರಮಾಣ ಕಡಿಮೆಯಿತ್ತು. 2015ರಲ್ಲಿ ಈ ಯೋಜನೆಯಡಿ ಒಟ್ಟು 72,960 ಕಾರ್ಮಿಕರಿದ್ದು ಇದರಲ್ಲಿ 1955 ಭಾರತೀಯರು ಎಂದು ವರದಿ ಹೇಳಿದೆ. ತೀವ್ರ ಟೀಕೆ, ಖಂಡನೆಗಳ ಬಳಿಕ, ತಾತ್ಕಾಲಿಕ ವಿದೇಶಿ ಕಾರ್ಮಿಕರ ಸಂಖ್ಯೆಯನ್ನು ಕಡಿಮೆಗೊಳಿಸಲು ಪ್ರಯತ್ನಿಸುತ್ತಿರುವುದಾಗಿ ಮತ್ತು ಯೋಜನೆಯಲ್ಲಿ ವಂಚನೆ ಮತ್ತು ದುರ್ಬಳಕೆಯನ್ನು ತಡೆಯಲು ಕ್ರಮ ಕೈಗೊಳ್ಳುವುದಾಗಿ ಕಳೆದ ವಾರ ಕೆನಡಾ ಸರಕಾರ ಹೇಳಿಕೆ ನೀಡಿದೆ. ಕೆನಡಾದಲ್ಲಿ ಪ್ರತಿಭಾವಂತ ಕೆಲಸಗಾರರನ್ನು ನೇಮಿಸಿಕೊಳ್ಳಲು ತಾತ್ಕಾಲಿಕ ವಿದೇಶಿ ಕಾರ್ಮಿಕರ ಯೋಜನೆ ತಡೆಯಾಗಬಾರದು ಎಂದು ಕೆನಡಾದ ಕಾರ್ಮಿಕ ಸಚಿವ ರ‍್ಯಾಂಡಿ ಬೊಯ್ಸೊನಾಲ್ಟ್ ಹೇಳಿದ್ದಾರೆ.
►ಬ್ಲೂಮ್ ಬರ್ಗ್ ವರದಿ
ಈ ಯೋಜನೆಯಡಿ ಕೆನಡಾವು ಸುಮಾರು 2,40,000 ಕಾರ್ಮಿಕರನ್ನು ಕರೆತರಲು ಉದ್ಯೋಗದಾತರಿಗೆ ಅವಕಾಶ ಮಾಡಿಕೊಟ್ಟಿದ್ದು ಇದು 2019ಕ್ಕಿಂತ ಎರಡು ಪಟ್ಟು ಹೆಚ್ಚು ಎಂದು ಬ್ಲೂಮ್‍ಬರ್ಗ್ ಏಜೆನ್ಸಿ ವರದಿ ಮಾಡಿದೆ. ಇದರಲ್ಲಿ 20%ದಷ್ಟು ಹುದ್ದೆಗಳು ಹೋಟೆಲ್ ಗಳು, ರಿಟೇಲ್ ಅಂಗಡಿಗಳಿಗೆ ಸಂಬಂಧಿಸಿದ್ದು ಅಡುಗೆ ತಯಾರಕರು, ಆಹಾರ ಕೌಂಟರ್ ಪರಿಚಾರಕರು ಮತ್ತು ಕ್ಯಾಶಿಯರ್ ಗಳು ಸೇರಿದ್ದಾರೆ ಎಂದು ವರದಿ ಹೇಳಿದೆ. ಅಗ್ಗದ ವಿದೇಶಿ ಕಾರ್ಮಿಕರು ಕೆನಡಾಕ್ಕೆ ಲಗ್ಗೆ ಇಡುತ್ತಿರುವುದರಿಂದ ಕೆನಡಾದ ಯುವ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಕೆನಡಾದ ಯುವಜನತೆಗೆ ಉದ್ಯೋಗ ಪಡೆಯಲು ಕಷ್ಟವಾಗುತ್ತಿದೆ. ಹೋಟೆಲ್‍ಗಳು, ರಿಟೇಲ್ ಅಂಗಡಿಗಳಲ್ಲಿ ವಿದೇಶಿ ಕಾರ್ಮಿಕರ ಪ್ರವಾಹವು ಕೆನಡಾದ ಯುವಜನತೆಯ ಬವಣೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ವರದಿ ಹೇಳಿದೆ.