ಕೆನಡಾದ ಹಿಂದೂ ದೇವಾಲಯದಲ್ಲಿ ಭಕ್ತರ ಮೇಲೆ ದಾಳಿ; ಜಸ್ಟಿನ್ ಟ್ರುಡೊ ಪ್ರತಿಕ್ರಿಯಿಸಿದ್ದು ಹೀಗೆ...
PC : X \ @AryaCanada ,
ಹೊಸದಿಲ್ಲಿ: ಕೆನಡಾದ ಹಿಂದೂ ದೇವಾಲಯದಲ್ಲಿ ನಡೆದ ಭಕ್ತರ ಮೇಲಿನ ದಾಳಿಯನ್ನು ʼಸ್ವೀಕಾರಾರ್ಹವಲ್ಲʼ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿದ್ದು, ಕೆನಡಾದಲ್ಲಿ ಮುಕ್ತವಾಗಿ ಧರ್ಮವನ್ನು ಆಚರಿಸುವ ಹಕ್ಕನ್ನು ಪ್ರತಿಪಾದಿಸಿದ್ದಾರೆ.
ಕೆನಡಾದ ಬ್ರಾಮ್ಟನ್ನಲ್ಲಿರುವ ಹಿಂದೂ ಸಭಾ ದೇವಾಲಯದ ಆವರಣದಲ್ಲಿ ಭಕ್ತರ ಮೇಲೆ ಖಾಲಿಸ್ತಾನಿ ಪ್ರತ್ಯೇಕತಾವಾದಿಗಳ ದಾಳಿ ನಂತರ ದೇವಾಲಯದ ಬಳಿ ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ತಮ್ಮ ಧರ್ಮವನ್ನು ಮುಕ್ತವಾಗಿ ಮತ್ತು ಸುರಕ್ಷಿತವಾಗಿ ಆಚರಿಸುವ ಹಕ್ಕು ಎಲ್ಲರಿಗೂ ಇದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿದ್ದಾರೆ.
ವೈರಲ್ ಆಗಿರುವ ವೀಡಿಯೊಗಳಲ್ಲಿ ಗುಂಪೊಂದು ದೇವಾಲಯದ ಆವರಣವನ್ನು ಪ್ರವೇಶಿಸಿ ಭಕ್ತರ ಮೇಲೆ ಹಲ್ಲೆ ನಡೆಸುವುದು ಕಂಡು ಬಂದಿದೆ. ಘಟನೆಗೆ ಸಂಬಂಧಿಸಿ ಯಾರನ್ನು ಕೂಡ ಬಂಧಿಸಲಾಗಿಲ್ಲ. ಕೆನಡಾ ಸಂಸದ ಚಂದ್ರ ಆರ್ಯ ಈ ಕುರಿತು ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಕೆನಡಾದಲ್ಲಿ ಹಿಂಸಾತ್ಮಕ ಮನಸ್ಥಿತಿಯು ಎಷ್ಟು ಆಳವಾಗಿದೆ ಎನ್ನುವುದನ್ನು ಈ ಘಟನೆಯು ತೋರಿಸುತ್ತದೆ ಎಂದು ಹೇಳಿದ್ದಾರೆ
ಕೆನಡಾದ ವಿರೋಧ ಪಕ್ಷದ ನಾಯಕ ಪಿಯರೆ ಪೊಯ್ಲಿವ್ರೆ ಜನರನ್ನು ಒಗ್ಗೂಡಿಸಿ ಗೊಂದಲವನ್ನು ನಿವಾರಿಸುವುದಾಗಿ ಹೇಳಿದ್ದಾರೆ. ಟೊರೊಂಟೊ ಸಂಸದ ಕೆವಿನ್ ವುಂಗ್ ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ನಮ್ಮ ನಾಯಕರು ಹಿಂದೂಗಳನ್ನು, ಕ್ರಿಶ್ಚಿಯನ್ನರು ಮತ್ತು ಯಹೂದಿ ಕೆನಡಿಯನ್ನರನ್ನು ರಕ್ಷಿಸುವಲ್ಲಿ ವಿಫಲರಾಗಿದ್ದಾರೆ. ನಾವೆಲ್ಲರೂ ಶಾಂತಿಯಿಂದ ಪೂಜಿಸಲು ಅರ್ಹರು ಎಂದು ಹೇಳಿದ್ದಾರೆ.
ಕೆನಡಾದಲ್ಲಿ ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಬಳಿಕ ಭಾರತ ಹಾಗೂ ಕೆನಡಾ ನಡುವಿನ ಸಂಬಂಧ ಹದಗೆಟ್ಟಿತ್ತು. ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಗೃಹ ಸಚಿವ ಅಮಿತ್ ಶಾ ಕೈವಾಡದ ಬಗ್ಗೆ ಕೆನಡಾ ಆರೋಪಿಸಿತ್ತು. ಈ ಆರೋಪವನ್ನು ಭಾರತ ನಿರಾಕರಿಸಿತ್ತು.