ಕದನ ವಿರಾಮ: ಇಸ್ರೇಲ್ ಮೇಲೆ ಹೆಚ್ಚಿದ ಒತ್ತಡ
ಸಚಿವ ಸಂಪುಟ ಸಭೆಯಲ್ಲಿ ನೆತನ್ಯಾಹು ಚರ್ಚೆ
ಬೆಂಜಮಿನ್ ನೆತನ್ಯಾಹು | PC : PTI
ಬೈರೂತ್: ಲೆಬನಾನ್ನಲ್ಲಿ ಇಸ್ರೇಲ್ ಹಾಗೂ ಹಿಜ್ಬುಲ್ಲಾ ಸಶಸ್ತ್ರ ಹೋರಾಟಗಾರರ ಗುಂಪಿನ ನಡುವೆ ಕದನ ವಿರಾಮ ಒಪ್ಪಂದಕ್ಕೆ ಸಹಮತ ಸೂಚಿಸುವಂತೆ ಇಸ್ರೇಲ್ ಮೇಲೆ ಒತ್ತಡ ಹೆಚ್ಚುತ್ತಿರುವುದಾಗಿ ಪ್ರಾದೇಶಿಕ ಮೂಲಗಳನ್ನು ಉಲ್ಲೇಖಿಸಿ ಸಿಎನ್ಎನ್ ವರದಿ ಮಾಡಿದೆ.
ಕದನ ವಿರಾಮದ ಸಾಧ್ಯತೆ ಈ ಹಿಂದಿಗಿಂತಲೂ ಬಹಳ ನಿಕಟವಾಗಿದ್ದರೂ ಇನ್ನೂ ಖಚಿತವಾಗಿಲ್ಲ. ಕದನ ವಿರಾಮ ಒಪ್ಪಂದಕ್ಕೆ ಸಂಬಂಧಿಸಿ ನಾವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದೇವೆ. ಆದರೆ ಇನ್ನೂ ಕೆಲವು ವಿಷಯಗಳನ್ನು ಇತ್ಯರ್ಥಗೊಳಿಸಬೇಕಾಗಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ವಕ್ತಾರರನ್ನು ಉಲ್ಲೇಖಿಸಿದ ವರದಿ ಹೇಳಿದೆ. 60 ದಿನಗಳ ಕದನ ವಿರಾಮದ ಬಗ್ಗೆ ಅಮೆರಿಕ ಮುಂದಿರಿಸಿದ ಪ್ರಸ್ತಾಪವನ್ನು ಹಿಜ್ಬುಲ್ಲಾ ಪರಿಗಣಿಸಿದೆ. ಆದರೆ ಕೆಲವು ಪ್ರಮುಖ ವಿಷಯಗಳ ಬಗ್ಗೆ ಇನ್ನೂ ಸಹಮತ ಮೂಡಿಲ್ಲ. ಅಮೆರಿಕದ ಮಧ್ಯಸ್ಥಿಕೆದಾರ ಅಮೋಸ್ ಹೊಚ್ಸ್ಟೈನ್ ಈ ವಾರ ಎಲ್ಲಾ ಪ್ರಾದೇಶಿಕ ಪಕ್ಷಗಳ(ಸಂಘರ್ಷಕ್ಕೆ ಸಂಬಂಧಿಸಿದ ದೇಶಗಳು, ಗುಂಪುಗಳು) ಜತೆ ಮಾತುಕತೆ ನಡೆಸಲಿದ್ದು ಕದನ ವಿರಾಮ ಒಪ್ಪಂದದ ನಿಟ್ಟಿನಲ್ಲಿ ನಡೆದಿರುವ ಪ್ರಗತಿಯನ್ನು ವಿವರಿಸಲಿದ್ದಾರೆ.
ಈ ಮಧ್ಯೆ, ಕದನ ವಿರಾಮ ಪ್ರಸ್ತಾಪಕ್ಕೆ ಮುಂದಿನ ದಿನಗಳಲ್ಲಿ ಇಸ್ರೇಲ್ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಮಧ್ಯಸ್ಥಿಕೆ ಪ್ರಯತ್ನಗಳಿಂದ ಹಿಂದೆ ಸರಿಯುವುದಾಗಿ ಹೊಚ್ಸ್ಟೈನ್ ಇಸ್ರೇಲ್ಗೆ ಸ್ಪಷ್ಟಪಡಿಸಿದ್ದಾರೆ. ಕದನ ವಿರಾಮ ಪ್ರಸ್ತಾಪಕ್ಕೆ ಇಸ್ರೇಲ್ನ ಅಂತಿಮ ಅನುಮೋದನೆಯನ್ನು ಎದುರು ನೋಡುತ್ತಿರುವುದಾಗಿ ಯುರೋಪಿಯನ್ ಯೂನಿಯನ್ ವಿದೇಶಾಂಗ ನೀತಿ ಮುಖ್ಯಸ್ಥ ಜೋಸೆಫ್ ಬೊರೆಲ್ ರವಿವಾರ ಹೇಳಿದ್ದಾರೆ. ಕದನ ವಿರಾಮ ಪ್ರಸ್ತಾಪದ ಬಗ್ಗೆ ಇಸ್ರೇಲ್ ಪ್ರಧಾನಿ ನೆತನ್ಯಾಹು ಸಚಿವ ಸಂಪುಟದ ಸಭೆಯಲ್ಲಿ ಚರ್ಚಿಸಿದ್ದು ಅಮೆರಿಕ ಬೆಂಬಲಿತ ಕದನ ವಿರಾಮವನ್ನು ಸಂಪುಟ ಅನುಮೋದಿಸಿದೆ. ಅದನ್ನು ಸಾರ್ವಜನಿಕರಿಗೆ ಹೇಗೆ ಪ್ರಸ್ತುತಪಡಿಸಬೇಕು ಎಂಬುದರ ಕುರಿತು ನೆತನ್ಯಾಹು ಕೆಲಸ ಮಾಡುತ್ತಿದ್ದಾರೆ ಎಂದು `ಟೈಮ್ಸ್ ಆಫ್ ಇಸ್ರೇಲ್' ವರದಿ ಮಾಡಿದೆ.
ಮೂರು ಹಂತದ ಕದನ ವಿರಾಮ:
ಲೆಬನಾನ್ನಲ್ಲಿ ಇಸ್ರೇಲ್- ಹಿಜ್ಬುಲ್ಲಾ ಕದನ ವಿರಾಮದ ಬಗ್ಗೆ ಅಮೆರಿಕ ಮುಂದಿರಿಸಿದ ಪ್ರಸ್ತಾಪ ಮೂರು ಹಂತಗಳನ್ನು ಒಳಗೊಂಡಿದೆ. ಮೊದಲನೆಯ ಹಂತ- ಕದನ ವಿರಾಮ ಒಪ್ಪಂದದ ಬಳಿಕ ಹಿಜ್ಬುಲ್ಲಾ ತನ್ನ ಹೋರಾಟಗಾರರನ್ನು ಇಸ್ರೇಲ್ ಗಡಿಭಾಗದಿಂದ ಸುಮಾರು 30 ಕಿ.ಮೀ.ನಷ್ಟು ಹಿಂದಕ್ಕೆ ಕರೆಸಿಕೊಳ್ಳಬೇಕು. ಎರಡನೆಯ ಹಂತ- ದಕ್ಷಿಣ ಲೆಬನಾನ್ನಿಂದ ಇಸ್ರೇಲ್ ಹಿಂದಕ್ಕೆ ಸರಿಯುವುದು. ಮೂರನೆಯ ಹಂತ- ವಿವಾದಿತ ಗಡಿ ರೇಖೆಯ ಬಗ್ಗೆ ಇಸ್ರೇಲ್-ಲೆಬನಾನ್ ನಡುವೆ ಮಾತುಕತೆ.