2023ರ ಜನಗಣತಿ | ಪಾಕಿಸ್ತಾನದಲ್ಲಿ ಹಿಂದೂಗಳ ಜನಸಂಖ್ಯೆಯಲ್ಲಿ ಹೆಚ್ಚಳ
ಸಾಂದರ್ಭಿಕ ಚಿತ್ರ
ಇಸ್ಲಾಮಾಬಾದ್ : ಪಾಕಿಸ್ತಾನದ ಹಿಂದೂ ಸಮುದಾಯದ ಜನಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು 2023ರ ಜನಸಂಖ್ಯೆಯ ಅಧಿಕೃತ ದತ್ತಾಂಶ ತಿಳಿಸಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಜನಗಣತಿಯನ್ವಯ 2017ರಲ್ಲಿ 35 ಲಕ್ಷವಿದ್ದ ಈ ಸಮುದಾಯದ ಜನಸಂಖ್ಯೆಯು 2023ರಲ್ಲಿ 38 ಲಕ್ಷಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.
ಈ ಮೂಲಕ ಹಿಂದೂ ಸಮುದಾಯವು ಪಾಕಿಸ್ತಾನದ ಅತ್ಯಂತ ದೊಡ್ಡ ಅಲ್ಪಸಂಖ್ಯಾತ ಸಮುದಾಯ ಎಂದು ಪಾಕಿಸ್ತಾನ ಅಂಕಿಅಂಶ ಕಾರ್ಯಾಲಯ (ಪಿಬಿಎಸ್) ನೀಡಿರುವ ‘ಜನಸಂಖ್ಯೆ ಮತ್ತು ವಸತಿ ಗಣತಿ– 2023’ರ ದತ್ತಾಂಶವನ್ನು ಆಧರಿಸಿ, ಅಲ್ಲಿಯ ಡಾನ್ ಸುದ್ದಿಪತ್ರಿಕೆ ವರದಿ ಮಾಡಿದೆ.
2023ರ ಜನಗಣತಿಯಂತೆ ದೇಶದ ಒಟ್ಟು ಜನಸಂಖ್ಯೆ 24.08 ಕೋಟಿ. ಅಂಕಿ ಅಂಶಗಳ ಪ್ರಕಾರ ಮುಸ್ಲಿಮರ ಜನಸಂಖ್ಯೆಯಲ್ಲಿ ಅಲ್ಪ ಇಳಿಕೆಯಾಗಿದೆ. 2017ರಲ್ಲಿ ಮುಸ್ಲಿಂ ಸಮುದಾಯದ ಜನಸಂಖ್ಯೆಯು ಶೇ 96.47ವಿತ್ತು. 2023ರಲ್ಲಿ ಶೇ 96.35ಕ್ಕೆ ಅಲ್ಪ ಇಳಿಕೆ ಕಂಡಿದೆ. 26 ಲಕ್ಷ ಇದ್ದ ಕ್ರಿಶ್ಚಿಯನ್ನರ ಜನಸಂಖ್ಯೆಯು 33 ಲಕ್ಷಕ್ಕೆ ಏರಿಕೆಯಾಗಿದೆ. ಅಲ್ಲದೇ, ಪಾಕಿಸ್ತಾನದಲ್ಲಿ ಅಹ್ಮದೀಯರು 1.62 ಲಕ್ಷ, ಸಿಖ್ ಸಮುದಾಯದವರು 15,998 ಮತ್ತು ಪಾರ್ಸಿಗಳು 2,348 ಸಂಖ್ಯೆಯಲ್ಲಿದ್ದಾರೆ.