ಗಾಝಾ ಕುರಿತ ಭದ್ರತಾ ಮಂಡಳಿ ಕರಡು ನಿರ್ಣಯದಲ್ಲಿ ಬದಲಾವಣೆ: ಅಮೆರಿಕದ ಪಟ್ಟು
ಗಾಝಾ - Photo: PTI
ವಿಶ್ವಸಂಸ್ಥೆ: ಗಾಝಾ ಪ್ರದೇಶಕ್ಕೆ ತೀರಾ ಅಗತ್ಯವಿರುವ ನೆರವನ್ನು ಉತ್ತೇಜಿಸಲು ಭದ್ರತಾ ಮಂಡಳಿಯ ನಿರ್ಣಯಕ್ಕೆ ಅಮೆರಿಕದ ಹಿತಾಸಕ್ತಿಗೆ ಪ್ರಮುಖವಾದ ಎರಡು ವಿಷಯಗಳು ಅಡ್ಡಿಯಾಗಿವೆ ಎಂದು ವರದಿಯಾಗಿದೆ.
ಸಂಘರ್ಷದ ನಿಲುಗಡೆ ಮತ್ತು ನೆರವನ್ನು ಹೊತ್ತು ತರುವ ಟ್ರಕ್ ಗಳು ನಿಜವಾಗಿಯೂ ಮಾನವೀಯ ನೆರವಿನ ಸರಕನ್ನು ಹೊಂದಿವೆಯೇ ಎಂಬುದನ್ನು ವಿಶ್ವಸಂಸ್ಥೆ ಪರಿಶೀಲಿಸಬೇಕು ಎಂಬ ಎರಡು ವಿಷಯಗಳು ನಿರ್ಣಯದ ಅನುಮೋದನೆಗೆ ತೊಡಕಾಗಿವೆ.
ಅರಬ್ ಪ್ರಾಯೋಜಿತ ನಿರ್ಣಯ ಮಂಡನೆಯನ್ನು ಮೊದಲು ಸೋಮವಾರಕ್ಕೆ ಮುಂದೂಡಲಾಗಿತ್ತು. ಬಳಿಕ ಬುಧವಾರಕ್ಕೆ ಮುಂದೂಡಲಾಗಿದ್ದು ಅಮೆರಿಕ ಮತ್ತೊಮ್ಮೆ ವೀಟೊ ಪ್ರಯೋಗಿಸುವುದನ್ನು ತಪ್ಪಿಸಲು ವ್ಯಾಪಕ ಸಮಾಲೋಚನೆ, ಮಾತುಕತೆ ನಡೆಯುತ್ತಿದೆ. ‘ನಿರ್ಣಯದ ವಿಧಾನದ ಬಗ್ಗೆ ನಾವು ಕಾರ್ಯನಿರ್ವಹಿಸುತ್ತಿದ್ದೇವೆ. ಇಲ್ಲಿರುವ (ಗಾಝಾದಲ್ಲಿ) ಅಪಾಯವೇನು, ಅಕ್ಟೋಬರ್ 7ರಂದು ಹಮಾಸ್ ಏನು ಮಾಡಿದೆ ಮತ್ತು ಆ ಬೆದರಿಕೆಯ ವಿರುದ್ಧ ಇಸ್ರೇಲ್ ಸ್ವಯಂರಕ್ಷಣೆಯ ಹಕ್ಕನ್ನು ಹೇಗೆ ಹೊಂದಿದೆ ಎಂಬುದನ್ನು ಪ್ರಪಂಚದ ಉಳಿದ ಭಾಗಗಳು ಅರ್ಥಮಾಡಿಕೊಳ್ಳುವುದು ನಮಗೆ ಮುಖ್ಯವಾಗಿದೆ’ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್ ಕಿರ್ಬಿ ಹೇಳಿದ್ದಾರೆ.
ಸೋಮವಾರ ಮುಂದಿರಿಸಲಾದ ಕರಡು ನಿರ್ಣಯದಲ್ಲಿ ‘ಯುದ್ಧಗಳ ತುರ್ತು ಮತ್ತು ಸಮರ್ಥನೀಯ ನಿಲುಗಡೆಗೆ’ ಕರೆ ನೀಡಲಾಗಿತ್ತು. ಆದರೆ ಅಮೆರಿಕದ ಆಕ್ಷೇಪದ ಬಳಿಕ ಮಂಗಳವಾರ ತಿದ್ದುಪಡಿ ಮಾಡಲಾದ ನಿರ್ಣಯದಲ್ಲಿ ‘ಸುರಕ್ಷಿತ ಮತ್ತು ಅಡೆತಡೆಯಿಲ್ಲದ ಮಾನವೀಯ ಪ್ರವೇಶವನ್ನು ಅನುಮತಿಸಲು ಹಗೆತನವನ್ನು ತುರ್ತು ಅಮಾನತುಗೊಳಿಸಲು ಮತ್ತು ಯುದ್ಧದ ಸಮರ್ಥನೀಯ ನಿಲುಗಡೆಗೆ ತುರ್ತು ಕ್ರಮಗಳಿಗಾಗಿ’ ಕರೆ ನೀಡಲಾಗಿದೆ. ಜತೆಗೆ, ಗಾಝಾಕ್ಕೆ ನೆರವು ವಿತರಣೆಯ ಮೇಲ್ವಿಚಾರಣೆ ಮಾಡಲು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಕಾರ್ಯವಿಧಾನ ರೂಪಿಸುವಂತೆ ನಿರ್ಣಯ ಕರೆ ನೀಡಿದೆ.
ಭದ್ರತಾ ಮಂಡಳಿಯ ನಿರ್ಣಯಗಳು ಪ್ರಮುಖವಾಗಿವೆ ಯಾಕೆಂದರೆ ಅವು ಕಾನೂನುಬದ್ಧವಾಗಿ ಬದ್ಧವಾಗಿರುತ್ತವೆ. ಆದರೆ ಆಚರಣೆಯಲ್ಲಿ ಅನೇಕ ಬಾರಿ ಭದ್ರತಾ ಮಂಡಳಿಯ ನಿರ್ಣಯವನ್ನು ನಿರ್ಲಕ್ಷಿಸಲಾಗುತ್ತಿದೆ. ವಿಶ್ವಸಂಸ್ಥೆ ಸಾಮಾನ್ಯ ಸಭೆಯ ನಿರ್ಣಯಗಳು ವಿಧ್ಯುಕ್ತವಾಗಿ ಬದ್ಧವಾಗಿಲ್ಲ. ಆದರೂ ಅವು ಜಾಗತಿಕ ಅಭಿಪ್ರಾಯದ ಗಮನಾರ್ಹ ಮಾಪಕವೆಂದು ಪರಿಗಣಿತವಾಗಿದೆ.
ಅಮೆರಿಕದ ಆಕ್ಷೇಪ
ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯದಲ್ಲಿ ಯುದ್ಧದ ನಿಲುಗಡೆ ಎಂಬ ಪದ ಬಳಕೆಯನ್ನು ಅಮೆರಿಕ ಆಕ್ಷೇಪಿಸುತ್ತಿದ್ದು ಡಿಸೆಂಬರ್ 12ರಂದು ಭದ್ರತಾ ಮಂಡಳಿಯ ನಿರ್ಣಯ 153-10 ಮತಗಳಿಂದ ಅನುಮೋದನೆಗೊಂಡಾಗ ವೀಟೊ ಬಳಸಿ ನಿರ್ಣಯವನ್ನು ತಡೆಹಿಡಿದಿದೆ. ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ಹಠಾತ್ ದಾಳಿಯನ್ನು ಖಂಡಿಸಬೇಕು ಮತ್ತು ಇಸ್ರೇಲ್ ನ ಸ್ವರಕ್ಷಣೆಯ ಹಕ್ಕನ್ನು ನಿರ್ಣಯದಲ್ಲಿ ಗುರುತಿಸಬೇಕು ಎಂಬುದು ಅಮೆರಿಕದ ಪ್ರತಿಪಾದನೆಯಾಗಿದೆ.