ಭಾರತ-ಅಮೆರಿಕ ವ್ಯಾಪಾರ ಸಂಬಂಧಕ್ಕೆ ಚಪಾತಿ, ಪೂರಿ ಉಲ್ಲೇಖಿಸಿದ ಅಧಿಕಾರಿ
ವಾಷಿಂಗ್ಟನ್ : ಭಾರತ ಮತ್ತು ಅಮೆರಿಕದ ನಡುವಿನ ವ್ಯಾಪಾರ ಸಂಬಂಧವನ್ನು ಬಣ್ಣಿಸುವ ಸಂದರ್ಭ ಅಮೆರಿಕ ಸರಕಾರದ ಹಿರಿಯ ಅಧಿಕಾರಿ ಚಪಾತಿ ಮತ್ತು ಪೂರಿಯ ಬಗ್ಗೆ ಉಲ್ಲೇಖಿಸಿದ್ದಾರೆ.
`ಉಭಯ ದೇಶಗಳ ನಡುವಿನ ವ್ಯಾಪಾರ ಸಂಬಂಧ ಚಪಾತಿಯಂತೆ ಚಪ್ಪಟೆಯಾಗಿದೆ ಎಂದು ಈಗ ಯಾರೂ ಹೇಳುವುದಿಲ್ಲ. ವ್ಯಾಪಾರ ಸಂಬಂಧ ಈಗ ಪೂರಿಯಂತೆ ಉಬ್ಬಿ ದೊಡ್ಡದಾಗಿದೆ' ಎಂದು ಅಮೆರಿಕದ ಇಂಧನ ಸಂಪನ್ಮೂಲ ಇಲಾಖೆಯ ಸಹಾಯಕ ಕಾರ್ಯದರ್ಶಿ ಜೆಫ್ರಿ ಆರ್. ಪ್ಯಾಟ್ ಹೇಳಿದ್ದಾರೆ.
ನಾವು ಪ್ರಸ್ತುತ ಭಾರತದೊಂದಿಗೆ ಯಾವುದೇ ರೀತಿಯ ಮುಕ್ತ ವ್ಯಾಪಾರ ಒಪ್ಪಂದ ಮಾತುಕತೆಯಲ್ಲಿ ತೊಡಗಿಸಿಕೊಂಡಿಲ್ಲ ಎಂದು ಭಾವಿಸುತ್ತೇನೆ. ಆದರೆ ನಮ್ಮ ವ್ಯಾಪಾರ ಸಂಬಂಧವನ್ನು ಇನ್ನಷ್ಟು ಗಾಢವಾಗಿಸುವ ಬಗ್ಗೆ ಪ್ರಮುಖ ಮಾತುಕತೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ. ಭಾರತ-ಅಮೆರಿಕ ಇಂಧನ ಸಹಕಾರ ಸಂಬಂಧವನ್ನು ಹೆಚ್ಚಿಸುವ ಬಗ್ಗೆ ಆಶಾವಾದ ವ್ಯಕ್ತಪಡಿಸಿದ ಅವರು, ಭಾರತದ ಜತೆಗಿನ ಸಹಕಾರ ಸಂಬಂಧ ಜಾಗತಿಕವಾಗಿ ಅಮೆರಿಕದ ಅತ್ಯಂತ ಪ್ರಮುಖ ಇಂಧನ ಮತ್ತು ಭದ್ರತಾ ಸಂಬಂಧಗಳಲ್ಲಿ ಒಂದಾಗಿದೆ ಎಂದು ಜೆಫ್ರಿ ಪ್ಯಾಟ್ ಹೇಳಿದ್ದಾರೆ.