ಚಿಕಾಗೊ: ಭಾರತೀಯ ವಿದ್ಯಾರ್ಥಿ ಮೇಲೆ ದರೋಡೆಕೋರರ ದಾಳಿ
Photo: twitter.com/amjedmbt
ಚಿಕಾಗೊ: ನಗರದಲ್ಲಿ ನಾಲ್ವರು ಡಕಾಯಿತರು ಹೈದರಾಬಾದ್ ಮೂಲದ ವಿದ್ಯಾರ್ಥಿಯೊಬ್ಬನ ಮೇಲೆ ದಾಳಿ ನಡೆಸಿದ್ದು, ವಿದ್ಯಾರ್ಥಿ ತೀವ್ರವಾಗಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.
ಗಾಯಾಳು ವಿದ್ಯಾರ್ಥಿಯನ್ನು ಹೈದರಾಬಾದ್ ನ ಲಂಗರ್ ಹೌಝ್ ಪ್ರದೇಶದ ನಿವಾಸಿ ಸೈಯ್ಯದ್ ಮಝಹಿರ್ ಅಲಿ ಎಂದು ಗುರುತಿಸಲಾಗಿದೆ. ಈತ ಅಮೆರಿಕದ ಇಂಡಿಯಾನಾ ವೆಸ್ಲಿಯನ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾಗಿದ್ದು, ಸ್ನಾತಕೋತ್ತರ ಪದವಿ ಪಡೆಯುವ ಸಲುವಾಗಿ ಅಮೆರಿಕಕ್ಕೆ ತೆರಳಿದ್ದರು.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈತ ಹಂಚಿಕೊಂಡಿರುವ ವಿಡಿಯೊದಲ್ಲಿ, ದರೋಡೆಕೋರರ ದಾಳಿಗೆ ಸಿಲುಕಿ ತೀವ್ರ ರಕ್ತಸ್ರಾವದಿಂದ ಬಳಲುತ್ತಿರುವುದು ಕಂಡುಬರುತ್ತಿದೆ. ಅಮೆರಿಕದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಗಳ ಮೇಲೆ ಸರಣಿ ದಾಳಿ ನಡೆಯುತ್ತಿರುವ ಘಟನೆಗಳ ನಡುವೆಯೇ ಇಂಥ ಮತ್ತೊಂದು ಘಟನೆ ವರದಿಯಾಗಿದೆ.
ಅಹಾರದ ಪೊಟ್ಟಣ ಹಿಡಿದು ಮನೆಗೆ ಬರುತ್ತಿದ್ದಾಗ ನಾಲ್ವರು ಡಕಾಯಿತರು ದಾಳಿ ನಡೆಸಿದರು ಎಂದು ಮಝಹಿರ್ ಅಲಿ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಕ್ಯಾಂಪ್ ಬೆಲ್ ಅವೆನ್ಯೂ ಎಂಬಲ್ಲಿ ಅವರ ನಿವಾಸದ ಬಳಿ, ಮೂವರು ಓಡಿಸಿಕೊಂಡು ಬಂದು ದಾಳಿ ನಡೆಸಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡುಬರುತ್ತಿದೆ.
ಏನೋ ಅನಾಹುತವಾಗುತ್ತಿದೆ ಎಂದು ತಿಳಿದು ತಪ್ಪಿಸಿಕೊಳ್ಳಲು ಅಲಿ ಪ್ರಯತ್ನಿಸುತ್ತಿರುವುದು ವಿಡಿಯೊದಲ್ಲಿ ಕಾಣಿಸುತ್ತಿದೆ. ಓಡಿ ಬರುತ್ತಿದ್ದಾಗ ಮನೆಯ ಬಳಿ ಜಾರಿ ಬಿದ್ದ ಸಂದರ್ಭದಲ್ಲಿ ವಿದ್ಯಾರ್ಥಿಯನ್ನು ಒದೆದು, ಗುದ್ದಿದರು ಎಂದು ದೃಶ್ಯಾವಳಿಯನ್ನು ಜಾಲತಾಣಗಳಲ್ಲಿ ಹಂಚಿಕೊಂಡ ಅವರು ವಿವರಿಸಿದ್ದಾರೆ.
ದಾಳಿ ನಡೆಸಿದ ಈ ನಾಲ್ವರು ವಿದ್ಯಾರ್ಥಿಯ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದಾರೆ. "ದಯವಿಟ್ಟು ನೆರವಾಗಿ, ಸಹೋದರರೇ ದಯವಿಟ್ಟು ನೆರವಾಗಿ" ಎಂದು ಅಂಗಲಾಚುತ್ತಿರುವುದು ವಿಡಿಯೊದ ಕೊನೆಯಲ್ಲಿ ಕಾಣಿಸುತ್ತಿದೆ.