ಮಕ್ಕಳ ಹಕ್ಕುಗಳ ಉಲ್ಲಂಘನೆ ಪ್ರಮಾಣ ತೀವ್ರ ಹೆಚ್ಚಳ : ಯುನಿಸೆಫ್ ವರದಿ
Photo: UNICEF
ವಿಶ್ವಸಂಸ್ಥೆ: 2022ರಲ್ಲಿ ವಿಶ್ವಸಂಸ್ಥೆಯು ಪರಿಶೀಲಿಸಿದ ಸಂಘರ್ಷ ಪ್ರಕರಣಗಳಲ್ಲಿ ಮಕ್ಕಳ ಹಕ್ಕುಗಳು ಅತೀ ಹೆಚ್ಚು ಗಂಭೀರ ಉಲ್ಲಂಘನೆಗೆ ಒಳಗಾಗಿದೆ. ಇಸ್ರೇಲ್ ಮತ್ತು ಫೆಲೆಸ್ತೀನ್, ಕಾಂಗೊ ಮತ್ತು ಸೊಮಾಲಿಯಾ ನಡುವಿನ ಸಂಘರ್ಷವು ಹೆಚ್ಚಿನ ಯುವಜನರನ್ನು ಅಪಾಯದಲ್ಲಿ ಸಿಲುಕಿಸಿದೆ ಎಂದು ವಿಶ್ವಸಂಸ್ಥೆಯ ಮಕ್ಕಳ ಏಜೆನ್ಸಿ ಯುನಿಸೆಫ್ ವರದಿ ಮಾಡಿದೆ.
ಹೋರಾಟಗಾರರು ಮಕ್ಕಳನ್ನು ನೇಮಿಸಿಕೊಳ್ಳುವುದು, ಹತ್ಯೆ ಮತ್ತು ಗಾಯ, ಲೈಂಗಿಕ ಹಿಂಸೆ, ಅಪಹರಣ ಮತ್ತು ಶಾಲೆಗಳು, ಆಸ್ಪತ್ರೆಗಳ ಮೇಲೆ ಆಕ್ರಮಣವು `ಗಂಭೀರ ಉಲ್ಲಂಘನೆ'ಯ ಪ್ರಕರಣಗಳಾಗಿವೆ. ಹೈಟಿ, ನೈಜೀರಿಯಾ, ಇಥಿಯೋಪಿಯಾ, ಮೊಝಾಂಬಿಕ್ ಮತ್ತು ಉಕ್ರೇನ್ ನಲ್ಲಿ ಮಕ್ಕಳ ಪರಿಸ್ಥಿತಿ ಕಳವಳಕಾರಿಯಾಗಿದೆ ಎಂದು ವರದಿ ಹೇಳಿದೆ.
2021ರಲ್ಲಿ ಮಕ್ಕಳ ಹಕ್ಕುಗಳ ಗಂಭೀರ ಉಲ್ಲಂಘನೆಯ 24,000 ಪ್ರಕರಣ ವರದಿಯಾಗಿದ್ದರೆ 2022ರಲ್ಲಿ ಇದು 27,000ಕ್ಕೇರಿದೆ. ಕಳವಳಕಾರಿ ಸಂಘರ್ಷಗಳ ಸಂಖ್ಯೆಯೂ 26ಕ್ಕೇರಿದೆ. ಸುಡಾನ್ನಲ್ಲಿ ಆರಂಭಗೊಂಡಿರುವ ಗಂಭೀರ ಸಂಘರ್ಷದ ಬಳಿಕದ ತೀವ್ರ ಹಿಂಸಾಚಾರದಿಂದ 1 ದಶಲಕ್ಷಕ್ಕೂ ಅಧಿಕ ಮಕ್ಕಳು ನೆಲೆ ಕಳೆದುಕೊಂಡಿದ್ದಾರೆ. ನೂರಕ್ಕೂ ಅಧಿಕ ಮಕ್ಕಳು ಹತರಾಗಿರುವ ಬಗ್ಗೆ ಮಾಹಿತಿ ಲಭಿಸಿದೆ. ಇತ್ತೀಚೆಗೆ ವೆಸ್ಟ್ಬ್ಯಾಂಕ್ನಲ್ಲಿ ಘರ್ಷಣೆ ತೀವ್ರಗೊಂಡಿರುವುದರಿಂದ ಫೆಲೆಸ್ತೀನ್ ನ ಮಕ್ಕಳ ಬವಣೆ ಮತ್ತಷ್ಟು ಹೆಚ್ಚಲಿದೆ.
ಮಕ್ಕಳ ರಕ್ಷಣೆಗೆ ತಮ್ಮ ಬದ್ಧತೆಯನ್ನು ಈಡೇರಿಸುವಲ್ಲಿ ಸರಕಾರ ಹಾಗೂ ಇತರರು ವಿಫಲವಾಗಿದ್ದಾರೆ ಎಂದು ಯುನಿಸೆಫ್ನ ಸಹಾಯಕ ಕಾರ್ಯನಿರ್ವಾಹಕ ನಿರ್ದೇಶಕ ಉಮರ್ ಅಬ್ದಿ ಬುಧವಾರ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಹೇಳಿದ್ದಾರೆ. 2022ರಲ್ಲಿ 18,890 ಮಕ್ಕಳ ವಿರುದ್ಧದ 27,180 ಗಂಭೀರ ಉಲ್ಲಂಘನೆಯಲ್ಲಿ 8,620 ಮಕ್ಕಳು ಹತರಾಗಿದ್ದಾರೆ ಅಥವಾ ಗಾಯಗೊಂಡಿದ್ದಾರೆ, 7,622 ಮಕ್ಕಳನ್ನು ಸರಕಾರ ಅಥವಾ ಸಶಸ್ತ್ರ ಗುಂಪುಗಳು ನೇಮಿಸಿಕೊಂಡು ಸಂಘರ್ಷದಲ್ಲಿ ಬಳಸಲಾಗಿದೆ, 3,985 ಮಕ್ಕಳನ್ನು ಅಪಹರಿಸಲಾಗಿದೆ, 1,165 ಹುಡುಗಿಯರ ಮೇಲೆ ಅತ್ಯಾಚಾರ ಎಸಗಿ, ಮದುವೆಯಾಗಲು ಅಥವಾ ಲೈಂಗಿಕ ಗುಲಾಮಗಿರಿಗೆ ಬಲವಂತಪಡಿಸಲಾಗಿದೆ . 1,163 ಶಾಲೆಗಳು ಮತ್ತು 647 ಆಸ್ಪತ್ರೆಗಳ ಮೇಲೆ ಆಕ್ರಮಣ ನಡೆದಿದ್ದು ಇದು 2021ಕ್ಕೆ ಹೋಲಿಸಿದರೆ 112%ದಷ್ಟು ಅಧಿಕವಾಗಿದೆ ಎಂದು ಸಶಸ್ತ್ರ ಸಂಘರ್ಷ ಪ್ರಕರಣಗಳಿಗೆ ಸಂಬಂಧಿಸಿದ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ವರ್ಜೀನಿಯಾ ಗಾಂಬ ಭದ್ರತಾ ಮಂಡಳಿಗೆ ತಿಳಿಸಿದ್ದಾರೆ.
ರಾಷ್ಟ್ರಗಳು ಸಂಘರ್ಷದ ಪರಿಣಾಮಗಳಿಂದ ಮಕ್ಕಳನ್ನು ರಕ್ಷಿಸಲು ಸಾಕಷ್ಟು ಕೆಲಸ ಮಾಡಿಲ್ಲ ಎಂಬುದನ್ನು ವರದಿ ದೃಢಪಡಿಸುತ್ತದೆ. ಈ ಸಮಸ್ಯೆಯನ್ನು ಭದ್ರತಾ ಮಂಡಳಿ ಗಂಭೀರವಾಗಿ ಪರಿಗಣಿಸಿ, ಪರಿಹಾರಕ್ಕೆ ಉನ್ನತ ಆದ್ಯತೆ ನೀಡುವ ನಿರೀಕ್ಷೆಯಿದೆ ಎಂದು ವಿಶ್ವಸಂಸ್ಥೆಗೆ ಅಮೆರಿಕದ ಸಹಾಯಕ ರಾಯಭಾರಿ ಜೆಫ್ರಿ ಡಿಲಾರೆಂಟ್ಸ್ ಹೇಳಿದ್ದಾರೆ.
ಕಪ್ಪುಪಟ್ಟಿಗೆ ಇಸ್ರೇಲ್ ಸೇರ್ಪಡೆಯಿಲ್ಲ
ಉಕ್ರೇನ್ ಸಂಘರ್ಷದಲ್ಲಿ ಬಾಲಕರು ಹಾಗೂ ಹುಡುಗಿಯರ ಹತ್ಯೆ, ಶಾಲೆಗಳು ಮತ್ತು ಆಸ್ಪತ್ರೆಗಳ ಮೇಲೆ ದಾಳಿ ಎಸಗುವ ಮೂಲಕ ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸಿದ್ದಕ್ಕೆ ರಶ್ಯವನ್ನು ವಿಶ್ವಸಂಸ್ಥೆಯ ವಾರ್ಷಿಕ ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎಂದು ಕಳೆದ ತಿಂಗಳು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಕಳೆದ ತಿಂಗಳು ಭದ್ರತಾ ಮಂಡಳಿಗೆ ಸಲ್ಲಿಸಿದ ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಿದ್ದರು.
ಆದರೆ ಕಳೆದ ವರ್ಷ 54 ಮಕ್ಕಳ ಹತ್ಯೆ ಸೇರಿದಂತೆ 1,139 ಫೆಲೆಸ್ತೀನಿಯನ್ ಮಕ್ಕಳ ಹಕ್ಕುಗಳ ಗಂಭೀರ ಉಲ್ಲಂಘನೆಗೆ ಕಾರಣವಾದ ಇಸ್ರೇಲ್ ಅನ್ನು ವಿಶ್ವಸಂಸ್ಥೆ ಕಪ್ಪುಪಟ್ಟಿಗೆ ಸೇರಿಸದಿರುವ ಬಗ್ಗೆ ಮಾನವ ಹಕ್ಕು ಸಂಘಟನೆಗಳಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ.