ಮ್ಯಾನ್ಮಾರ್ ಮಿಲಿಟರಿ, ಎಂಎನ್ಡಿಎಎ ನಡುವೆ ಕದನ ವಿರಾಮ: ಚೀನಾ

PC : ANI
ಬೀಜಿಂಗ್: ಮ್ಯಾನ್ಮಾರ್ ಮಿಲಿಟರಿ ಮತ್ತು ಅಲ್ಪಸಂಖ್ಯಾತ ಸಶಸ್ತ್ರ ಹೋರಾಟಗಾರರ ಗುಂಪು ಎಂಎನ್ಡಿಎಎ ಕದನ ವಿರಾಮವನ್ನು ಒಪ್ಪಿಕೊಂಡಿವೆ ಎಂದು ಚೀನಾದ ವಿದೇಶಾಂಗ ಇಲಾಖೆ ಹೇಳಿದೆ. ಮಾತುಕತೆಗೆ ಚೀನಾ ಮಧ್ಯಸ್ಥಿಕೆ ವಹಿಸಿತ್ತು.
ಚೀನಾದ ನೈಋತ್ಯ ನಗರ ಕುನ್ಮಿಂಗ್ನಲ್ಲಿ ಎರಡೂ ಕಡೆಯ ನಿಯೋಗದ ನಡುವೆ ನಡೆದ ಮಾತುಕತೆ ಯಶಸ್ವಿಯಾಗಿದ್ದು ಸಂಘರ್ಷವನ್ನು ಸ್ಥಗಿತಗೊಳಿಸಲು ಸಹಮತ ಮೂಡಿದೆ. ಶಾಂತಿ ಸ್ಥಾಪಿಸಲು ಚೀನಾ ನಡೆಸಿದ ಪ್ರಯತ್ನವನ್ನು ಎರಡೂ ಕಡೆಯವರು ಶ್ಲಾಘಿಸಿದ್ದಾರೆ ಎಂದು ಚೀನಾ ವಿದೇಶಾಂಗ ಇಲಾಖೆಯ ವಕ್ತಾರ ಮಾವೊ ನಿಂಗ್ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.
ಚೀನಾ-ಮ್ಯಾನ್ಮಾರ್ ಗಡಿಭಾಗದಲ್ಲಿ ಪ್ರಬಲವಾಗಿರುವ, ಚೀನೀ ಜನಾಂಗೀಯ ಅಲ್ಪಸಂಖ್ಯಾತ ಗುಂಪು ` ಮ್ಯಾನ್ಮಾರ್ ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ ಆರ್ಮಿ(ಎಂಎನ್ಡಿಎಎ)' ಗಡಿಭಾಗದ ಪ್ರಮುಖ ಸೇನಾನೆಲೆಯ ಮೇಲೆ ನಿಯಂತ್ರಣ ಸಾಧಿಸಿತ್ತು. ಮ್ಯಾನ್ಮಾರ್-ಚೀನಾ ಗಡಿಭಾಗದಲ್ಲಿ ಪ್ರಾಬಲ್ಯ ಸಾಧಿಸಿರುವ ತಾಂಗ್ ನ್ಯಾಷನಲ್ ಲಿಬರೇಷನ್ ಆರ್ಮಿ, ಅರಾಕನ್ ಆರ್ಮಿ ಮತ್ತು ಎಂಎನ್ಡಿಎಎ ಗುಂಪುಗಳು ಸೇರಿ `ಮೂರು ಸಹೋದರರ ಮೈತ್ರಿಕೂಟ' ಸ್ಥಾಪಿಸಿಕೊಂಡಿದ್ದು ಮ್ಯಾನ್ಮಾರ್ ಮಿಲಿಟರಿ ವಿರುದ್ಧ ಹೋರಾಡುತ್ತಿದ್ದು ಗಡಿಭಾಗದ ಪ್ರಮುಖ ಪ್ರದೇಶಗಳ ಮೇಲೆ ನಿಯಂತ್ರಣ ಸಾಧಿಸಿವೆ. ಮ್ಯಾನ್ಮಾರ್ ಜತೆಗಿನ ಸುಮಾರು 2000 ಕಿ.ಮೀ ಉದ್ದದ ಗಡಿಭಾಗದಲ್ಲಿ ಅವ್ಯವಸ್ಥೆ ನೆಲೆಸಿದರೆ ಮ್ಯಾನ್ಮಾರ್ ಜತೆಗಿನ ವ್ಯಾಪಾರಕ್ಕೆ ಧಕ್ಕೆಯಾಗಬಹುದು ಎಂಬ ಭೀತಿಯಿಂದ ಎರಡೂ ಗುಂಪಿನ ನಡುವೆ ಕದನ ವಿರಾಮಕ್ಕೆ ಚೀನಾ ನಿರಂತರ ಪ್ರಯತ್ನಿಸುತ್ತಿದೆ.