ಹೊಣೆಯರಿತು ವರ್ತಿಸಿ: ಅಮೆರಿಕ ವಿದೇಶಾಂಗ ಕಾರ್ಯದರ್ಶಿಗೆ ಚೀನಾ ಪರೋಕ್ಷ ಎಚ್ಚರಿಕೆ

ಮಾರ್ಕೋ ರೂಬಿಯೊ | PC : NDTV
ಬೀಜಿಂಗ್: ಅಮೆರಿಕದ ನೂತನ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರೂಬಿಯೊಗೆ ಚೀನಾ ಪರೋಕ್ಷ ಎಚ್ಚರಿಕೆ ನೀಡಿದ್ದು ಹೊಣೆಯರಿತು ವರ್ತಿಸುವಂತೆ ಸಲಹೆ ನೀಡಿದೆ.
ಮಾರ್ಕೊ ರೂಬಿಯೊಗೆ ದೂರವಾಣಿ ಕರೆ ಮಾಡಿದ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ` ನೀವು ಸಮಯ ಸಂದರ್ಭವನ್ನು ಗಮನಿಸಿ, ಹೊಣೆಯರಿತು ವರ್ತಿಸುವುದಾಗಿ ನಿರೀಕ್ಷಿಸುತ್ತೇವೆ' ಎಂದು ಪರೋಕ್ಷ ಎಚ್ಚರಿಕೆ ನೀಡಿರುವುದಾಗಿ ಚೀನಾದ ವಿದೇಶಾಂಗ ಇಲಾಖೆ ಹೇಳಿದೆ. ವಾಂಗ್ ಯಿ ಅವರ ಮಾತಿನ ಧಾಟಿ ಶಿಕ್ಷಕರು ವಿದ್ಯಾರ್ಥಿಗೆ ಅಥವಾ ಸಂಸ್ಥೆಯ ಬಾಸ್ ಸಿಬ್ಬಂದಿಗೆ ಸೂಚನೆ ನೀಡಿದ ರೀತಿಯಲ್ಲಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ. ಕೆಲ ದಿನಗಳ ಹಿಂದೆ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದಾಗ ಚೀನೀ ಅಧ್ಯಕ್ಷ ಕ್ಸಿಜಿಂಪಿಂಗ್ ಹೇಳಿಕೆಯ ಕುರಿತ ಪ್ರಶ್ನೆಗೆ ಉತ್ತರಿಸಿದ್ದ ರೂಬಿಯೊ `ಚೀನೀ ಭಾಷೆಯ ಕೆಲವು ಪದಗಳನ್ನು ನೇರವಾಗಿ ಇಂಗ್ಲಿಷ್ ಗೆ ಅನುವಾದಿಸಬಾರದು ' ಎಂದಿದ್ದರು.
ಈ ಮಧ್ಯೆ, ಚೀನಾದ ವಿದೇಶಾಂಗ ಸಚಿವರ ಜತೆಗಿನ ದೂರವಾಣಿ ಮಾತುಕತೆಯ ಬಗ್ಗೆ ಉಲ್ಲೇಖಿಸಿರುವ ಅಮೆರಿಕ ` ಟ್ರಂಪ್ ಆಡಳಿತವು ಚೀನಾದೊಂದಿಗಿನ ತನ್ನ ಸಂಬಂಧಗಳಲ್ಲಿ ಅಮೆರಿಕದ ಹಿತಾಸಕ್ತಿಗಳನ್ನು ಮುನ್ನಡೆಸುತ್ತದೆ ಎಂದು ರೂಬಿಯೊ ವಾಂಗ್ಗೆ ತಿಳಿಸಿದರು. ಮತ್ತು ತೈವಾನ್ ವಿರುದ್ಧ ಹಾಗೂ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಬಲವಂತದ ಕ್ರಮಗಳ ಬಗ್ಗೆ ಗಂಭೀರ ಕಳವಳವನ್ನು ವ್ಯಕ್ತಪಡಿಸಿದರು' ಎಂದು ಹೇಳಿದೆ.
ಅಮೆರಿಕದ ಸಂಸದರಾಗಿದ್ದ ಸಂದರ್ಭ ರೂಬಿಯೊ ಚೀನಾ ಮತ್ತು ಅದರ ಮಾನವ ಹಕ್ಕುಗಳ ದಾಖಲೆ ಬಗ್ಗೆ ಪದೇ ಪದೇ ಟೀಕಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಚೀನಾ ಸರಕಾರ 2020ರಲ್ಲಿ ಅವರ ವಿರುದ್ಧ ಎರಡು ಬಾರಿ ನಿರ್ಬಂಧ ಜಾರಿಗೊಳಿಸಿತ್ತು.