ಉತ್ತರ ಮ್ಯಾನ್ಮಾರ್ ತೊರೆಯುವಂತೆ ನಾಗರಿಕರಿಗೆ ಚೀನಾ ಆಗ್ರಹ
ಬೀಜಿಂಗ್: ಭದ್ರತೆಯ ಅಪಾಯ ಹೆಚ್ಚುತ್ತಿರುವುದರಿಂದ ಉತ್ತರ ಮ್ಯಾನ್ಮಾರ್‍ನ ಕೊಕಾಂಗ್ ಪ್ರಾಂತದ ಲವುಕ್ಕಯ್ ಪ್ರದೇಶವನ್ನು ಸಾಧ್ಯವಾದಷ್ಟು ಬೇಗ ತೊರೆಯುವಂತೆ ಮ್ಯಾನ್ಮಾರ್‍ನಲ್ಲಿನ ಚೀನಾ ರಾಯಭಾರ ಕಚೇರಿ ತನ್ನ ನಾಗರಿಕರನ್ನು ಆಗ್ರಹಿಸಿದೆ.
2021ರಲ್ಲಿ ನಡೆದ ದಂಗೆಯ ಮೂಲಕ ಆಡಳಿತವನ್ನು ವಶಕ್ಕೆ ಪಡೆದ ನಂತರದ ಅತೀ ದೊಡ್ಡ ಸವಾಲು ಮ್ಯಾನ್ಮಾರ್‍ನ ಸೇನೆಗೆ ಎದುರಾಗಿದ್ದು ಉತ್ತರದಲ್ಲಿ ಸಂಘಟಿತ ಬಂಡುಗೋರರ ದಾಳಿ ತೀವ್ರಗೊಂಡಿದೆ. `ಮ್ಯಾನ್ಮಾರ್‍ನ ಕೊಕಾಂಗ್ ಸ್ವ-ಆಡಳಿತ ವಲಯದಲ್ಲಿನ ಈಗಿನ ಭದ್ರತಾ ಪರಿಸ್ಥಿತಿ ಗಂಭೀರ ಮತ್ತು ಸಂಕೀರ್ಣವಾಗಿದೆ. ಸಂಬಂಧಿತ ಮ್ಯಾನ್ಮಾರ್ ಪಕ್ಷಗಳು ಗರಿಷ್ಟ ಸಂಯಮ ವಹಿಸಬೇಕು ಮತ್ತು ಈ ಪ್ರದೇಶದಲ್ಲಿನ ಉದ್ವಿಗ್ನತೆಯನ್ನು ತಗ್ಗಿಸುವ ಕ್ರಮಕ್ಕೆ ಮುಂದಾಗಬೇಕು ಮತ್ತು ಪರಿಸ್ಥಿತಿಯನ್ನು ಸುಧಾರಿಸಲು ಮುಂದಾಗಬೇಕು ಎಂದು ಚೀನಾ ವಿದೇಶಾಂಗ ಇಲಾಖೆಯ ವಕ್ತಾರೆ ಮಾವೊ ನಿಂಗ್ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದು, ಮ್ಯಾನ್ಮಾರ್‍ನಲ್ಲಿರುವ ಚೀನಾದ ಸಿಬಂದಿಯ ಸುರಕ್ಷತೆಯನ್ನು ಖಾತರಿ ಪಡಿಸುವಂತೆ ಸ್ಥಳೀಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ ಮ್ಯಾನ್ಮಾರ್‍ನ ಸೇನಾಡಳಿತ ಮತ್ತು ಬಂಡುಗೋರ ಗುಂಪುಗಳ ನಡುವೆ ಶಾಂತಿ ಮಾತುಕತೆಗೆ ಚೀನಾ ಮಧ್ಯಸ್ಥಿಕೆ ವಹಿಸಿತ್ತು ಮತ್ತು ತಾತ್ಕಾಲಿಕ ಕದನ ವಿರಾಮಕ್ಕೆ ಒಪ್ಪುವಂತೆ ಆಗ್ರಹಿಸಿತ್ತು. ಆದರೆ ಇದಕ್ಕೆ ಒಪ್ಪದ `ಪ್ರತಿರೋಧ ಪಡೆ' ಸೇನಾಡಳಿತದ ದಬ್ಬಾಳಿಕೆಯನ್ನು ಅಂತ್ಯಗೊಳಿಸಲು ಬದ್ಧ ಎಂದು ಪುನರುಚ್ಚರಿಸಿದೆ.