ತೈವಾನ್ ಸುತ್ತಮುತ್ತ ಚೀನಾ ಸಮರಾಭ್ಯಾಸ ಆರಂಭ; ಕಠಿಣ ಕ್ರಮದ ಎಚ್ಚರಿಕೆ ರವಾನೆ
Photo : PTI
ಬೀಜಿಂಗ್: ತೈವಾನ್ ಉಪಾಧ್ಯಕ್ಷ ವಿಲಿಯಂ ಲಾಯ್ ಅಮೆರಿಕ ಭೇಟಿಯಿಂದ ತೀವ್ರ ಆಕ್ರೋಶಗೊಂಡಿರುವ ಚೀನಾ ಶನಿವಾರ ತೈವಾನ್ ಸುತ್ತಮುತ್ತ ಮತ್ತೆ ಮಿಲಿಟರಿ ಕವಾಯತು ಆರಂಭಿಸುವ ಮೂಲಕ ಕಠಿಣ ಎಚ್ಚರಿಕೆ ರವಾನಿಸಿದೆ.
ಶನಿವಾರ ತೈವಾನ್ ದ್ವೀಪದ ಸುತ್ತಮುತ್ತ ವಾಯು ಮತ್ತು ಸಮುದ್ರಗಸ್ತು ಹಾಗೂ ನೌಕಾಪಡೆ, ವಾಯುಪಡೆಯ ಮಿಲಿಟರಿ ಕವಾಯತು ಆರಂಭವಾಗಿದೆ. ಗಸ್ತು ಮತ್ತು ವ್ಯಾಯಾಮಗಳು ಮಿಲಿಟರಿ ಹಡಗು ಹಾಗೂ ವಿಮಾನಗಳ ಸಮನ್ವಯಕ್ಕೆ ತರಬೇತಿ ನೀಡಲು ಮತ್ತು ವಾಯು ಮತ್ತು ಸಮುದ್ರ ಸ್ಥಳಗಳ ನಿಯಂತ್ರಣವನ್ನು ವಶಪಡಿಸಿಕೊಳ್ಳುವ ಸಾಮಥ್ರ್ಯವನ್ನು ಹೊಂದಿದೆ ಎಂದು ಚೀನಾ ಸೇನೆಯ ಈಸ್ಟರ್ನ್ ಥಿಯೇಟರ್ ಕಮಾಂಡ್ನ ವಕ್ತಾರ ಶಿ ಇಯಿ ಹೇಳಿರುವುದಾಗಿ ಸರಕಾರಿ ಸ್ವಾಮ್ಯದ ಕ್ಸಿನ್ಹುವ ಸುದ್ಧಿಸಂಸ್ಥೆ ವರದಿ ಮಾಡಿದೆ.
ವಾಯು ಮತ್ತು ಸಮುದ್ರದ ಸ್ಥಳಗಳ ನಿಯಂತ್ರಣವನ್ನು ವಶಪಡಿಸಿಕೊಳ್ಳಲು ಮತ್ತು ನೈಜ ಯುದ್ಧಪರಿಸ್ಥಿತಿಗಳಲ್ಲಿ ಹೋರಾಡಲು ಚೀನಾ ಸೇನೆಯ ಸಾಮಥ್ರ್ಯವನ್ನು ಪರೀಕ್ಷಿಸುವುದು ಈ ಸಮರಾಭ್ಯಾಸದ ಉದ್ದೇಶವಾಗಿದೆ. ಜತೆಗೆ, `ತೈವಾನ್ ಸ್ವಾತಂತ್ರ್ಯ' ಪ್ರತ್ಯೇಕತಾವಾದಿಗಳು ವಿದೇಶಿ ಶಕ್ತಿಗಳೊಂದಿಗೆ ಕೈಜೋಡಿಸುವುದು ಮತ್ತು ಅವರ ಪ್ರಚೋದನೆಗೆ ಒಳಗಾಗುವುದರ ವಿರುದ್ಧದ ಕಠಿಣ ಎಚ್ಚರಿಕೆ ಇದಾಗಿದೆ ಎಂದು ಶಿ ಇಯಿ ಹೇಳಿದ್ದಾರೆ.
ಕ್ಷಿಪಣಿಗಳಿಂದ ಸಜ್ಜುಗೊಂಡಿರುವ ನೌಕೆಗಳು ಹಾಗೂ ಯುದ್ಧವಿಮಾನಗಳು ಸಮರಾಭ್ಯಾಸದಲ್ಲಿ ತೊಡಗಿರುವ ವೀಡಿಯೊವನ್ನು ಸರಕಾರಿ ಸ್ವಾಮ್ಯದ ಟಿವಿವಾಹಿನಿ `ಸಿಟಿಟಿವಿ' ಪ್ರಸಾರ ಮಾಡಿದೆ.
ತೈವಾನ್ ಜಲಸಂಧಿಯಲ್ಲಿ ಚೀನೀ ಸೇನೆಯ ಪ್ರಚೋದನಕಾರಿ ನಡೆಯನ್ನು ನಿಕಟವಾಗಿ ಗಮನಿಸಲಾಗುತ್ತಿದ್ದು ತನ್ನ ಯುದ್ಧವಿಮಾನ ಹಾಗೂ ಸಮರನೌಕೆಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಭೂಮಿಯಿಂದ ಕಾರ್ಯಾಚರಿಸುವ ಕ್ಷಿಪಣಿ ವ್ಯವಸ್ಥೆಯನ್ನು ಸಜ್ಜುಗೊಳಿಸಲಾಗಿದೆ. ಚೀನಾದ ಸೇನೆ ಒಡ್ಡುವ ಬೆದರಿಕೆಯನ್ನು ಎದುರಿಸಲು ತಮ್ಮ ಸೇನೆ ಸಿದ್ಧವಾಗಿದೆ. ನಮ್ಮ ಪಡೆಗಳು ರಾಷ್ಟ್ರೀಯ ಭದ್ರತೆಯನ್ನು ಕಾಪಾಡುವ ಸಾಮಥ್ರ್ಯ, ದೃಢಸಂಕಲ್ಪ ಮತ್ತು ವಿಶ್ವಾಸವನ್ನು ಹೊಂದಿದೆ' ಎಂದು ತೈವಾನ್ನ ವಿದೇಶಾಂಗ ಇಲಾಖೆ ಹೇಳಿದೆ.
ಸಂಯಮ, ತಾಳ್ಮೆ ವಹಿಸುವಂತೆ ಎರಡೂ ದೇಶಗಳಿಗೆ ಸಲಹೆ ನೀಡಿರುವ ಅಮೆರಿಕ, ತೈವಾನ್ ಉಪಾಧ್ಯಕ್ಷ ಲಾಯ್ ಅವರ ಅಮೆರಿಕ ಭೇಟಿ ವಾಡಿಕೆಯ ಪ್ರಯಾಣವಾಗಿತ್ತು ಎಂದಿದೆ. ಆದರೆ ಇದನ್ನು ತಿರಸ್ಕರಿಸಿರುವ ಚೀನಾ `ಲಾಯ್ ಅವರ ಅಮೆರಿಕ ಭೇಟಿ ಮತ್ತೊಂದು ಪ್ರಚೋದನೆಯ ನಡೆಯಾಗಿದೆ. ಮುಂಬರುವ ಚುನಾವಣೆಯಲ್ಲಿ ಗೆಲ್ಲುವ ಏಕೈಕ ಉದ್ದೇಶದಿಂದ ಲಾಯ್ ನಡೆಸುವ ಇಂತಹ ಕೃತ್ಯಗಳು ತೈವಾನ್ ಅನ್ನು ಅಪಾಯಕಾರಿ ಯುದ್ಧದ ಅಂಚಿಗೆ ತಂದಿರಿಸಲಿದೆ' ಎಂದು ಎಚ್ಚರಿಸಿದೆ.