ಚೀನಾ | ಸೇತುವೆ ಕುಸಿದು 11 ಮೃತ್ಯು ; 30 ಮಂದಿ ನಾಪತ್ತೆ
PC: livemint.com
ಬೀಜಿಂಗ್ : ಉತ್ತರ ಚೀನಾದಲ್ಲಿ ಧಾರಾಕಾರ ಮಳೆಯಿಂದಾಗಿ ಸೇತುವೆಯೊಂದು ಕುಸಿದುಬಿದ್ದು 11 ಮಂದಿ ಮೃತಪಟ್ಟಿದ್ದಾರೆ ಹಾಗೂ 30ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿರುವುದಾಗಿ ಸರಕಾರಿ ಸ್ವಾಮ್ಯದ ಕ್ಸಿನ್ಹುಾವಾ ಸುದ್ದಿಸಂಸ್ಥೆ ಶನಿವಾರ ವರದಿ ಮಾಡಿದೆ.
ಕಳೆದ ಕೆಲ ದಿನಗಳಿಂದ ಉತ್ತರ ಮತ್ತು ಮಧ್ಯ ಚೀನಾದಲ್ಲಿ ಮಂಗಳವಾರದಿಂದ ಭಾರೀ ಮಳೆಯಾಗುತ್ತಿರುವುದರಿಂದ ಪ್ರವಾಹ ಉಂಟಾಗಿದ್ದು ವ್ಯಾಪಕ ಹಾನಿ ಸಂಭವಿಸಿದೆ. ಶುಕ್ರವಾರ ರಾತ್ರಿ 8:40ಕ್ಕೆ(ಸ್ಥಳೀಯ ಕಾಲಮಾನ) ದಿಢೀರ್ ಪ್ರವಾಹದಿಂದಾಗಿ ವಾಯವ್ಯ ಶಾಂಕ್ಸಿ ಪ್ರಾಂತದಲ್ಲಿರುವ ಸೇತುವೆ ನದಿಗೆ ಕುಸಿದು ಬಿದ್ದಿದೆ. ಸೇತುವೆಯ ಮೇಲಿಂದ ಸಾಗುತ್ತಿದ್ದ ಹಲವು ವಾಹನಗಳೂ ನದಿಗೆ ಬಿದ್ದಿದ್ದು ರಕ್ಷಣಾ ಕಾರ್ಯಾಚರಣೆಯಲ್ಲಿ 5 ವಾಹನಗಳನ್ನು ನದಿಯಿಂದ ಮೇಲೆತ್ತಲಾಗಿದೆ. ಇದರಲ್ಲಿ 11 ಮೃತದೇಹಗಳು ಪತ್ತೆಯಾಗಿವೆ. ಕೆಲವು ವಾಹನಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವುದಾಗಿ ಸಿಸಿಟಿವಿ ವರದಿ ಮಾಡಿದೆ.
ನೈಋತ್ಯ ಸಿಚುವಾನ್ ಪ್ರಾಂತದ ಯಾನ್ ನಗರದಲ್ಲಿ ಶನಿವಾರ ಸಿಡಿಲು ಮಿಂಚಿನ ಸಹಿತ ಸುರಿದ ಧಾರಾಕಾರ ಮಳೆ ಮತ್ತು ಪ್ರವಾಹದಿಂದಾಗಿ 30ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಶಾಂಕ್ಸಿ ಪ್ರಾಂತದ ಬವೋಜಿ ನಗರದಲ್ಲಿ ಶುಕ್ರವಾರ ಪ್ರವಾಹ, ಭೂಕುಸಿತದಿಂದ ಕನಿಷ್ಠ 5 ಮಂದಿ ಸಾವನ್ನಪ್ಪಿದ್ದು 8 ಮಂದಿ ನಾಪತ್ತೆಯಾಗಿದ್ದಾರೆ. ತಗ್ಗುಪ್ರದೇಶಗಳು ಜಲಾವೃತಗೊಂಡಿದ್ದು ಹಲವು ಮನೆಗಳಿಗೆ ನೀರು ನುಗ್ಗಿದೆ. ಗಾನ್ಸು ಮತ್ತು ಹೆನಾನ್ ಪ್ರಾಂತಗಳಲ್ಲೂ ಭಾರೀ ಮಳೆ ಸುರಿದಿದ್ದು ಹೆನಾನ್ನೆ ನನ್ಯಾಂಗ್ ನಗರದಲ್ಲಿ ಒಂದು ವಾರದಲ್ಲೇ ಒಂದು ವರ್ಷದ ಸರಾಸರಿ ಮಳೆ ಸುರಿದಿದೆ. ನಾಪತ್ತೆಯಾದವರನ್ನು ಪತ್ತೆಹಚ್ಚಲು ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆ ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಸೂಚಿಸಿದ್ದಾರೆ ಎಂದು ವರದಿ ಹೇಳಿದೆ.