ಅಮೆರಿಕದ ಕೆಲವು ಸರಕುಗಳಿಗೆ ಸುಂಕದಿಂದ ವಿನಾಯಿತಿ: ಚೀನಾ ಚಿಂತನೆ

ಸಾಂದರ್ಭಿಕ ಚಿತ್ರ | PC : freepik.com
ಬೀಜಿಂಗ್: ಅಮೆರಿಕದ ಆಮದುಗಳ ಮೇಲೆ ವಿಧಿಸಿರುವ 125% ಸುಂಕದ ವ್ಯಾಪ್ತಿಯಿಂದ ಕೆಲವು ಸರಕುಗಳಿಗೆ ವಿನಾಯಿತಿ ನೀಡಲು ಚೀನಾ ಚಿಂತನೆ ನಡೆಸಿದ್ದು ಅಮೆರಿಕ ನಿರ್ಮಿತ ಕೆಲವು ಔಷಧಿಗಳಿಗೆ 125% ಸುಂಕದಿಂದ ವಿನಾಯಿತಿ ನೀಡಲು ನಿರ್ಧರಿಸಿರುವುದಾಗಿ ವರದಿಯಾಗಿದೆ.
ಅಮೆರಿಕದೊಂದಿಗಿನ ಸುಂಕ ಸಮರದಿಂದ ಆರ್ಥಿಕ ಕುಸಿತದ ಬಗ್ಗೆ ಚಿಂತಿತವಾಗಿರುವ ಚೀನಾದ ವಾಣಿಜ್ಯ ಇಲಾಖೆ ಸುಂಕದಿಂದ ವಿನಾಯಿತಿ ಪಡೆಯಬಹುದಾದ ಸರಕುಗಳ ಪಟ್ಟಿಯನ್ನು ಸಂಗ್ರಹಿಸುತ್ತಿದೆ. ಅರ್ಹ ಸರಕುಗಳ ಪಟ್ಟಿಯನ್ನು ಒದಗಿಸುವಂತೆ ಉದ್ಯಮಿಗಳಿಗೆ ಸೂಚಿಸಿದ್ದು 8 ಸೆಮಿಕಂಡಕ್ಟರ್ ಉತ್ಪನ್ನಗಳನ್ನು ಈ ಪಟ್ಟಿಯಲ್ಲಿ ಸೇರಿಸಲು ಸಿದ್ಧತೆ ನಡೆಯುತ್ತಿದೆ. ಅಮೆರಿಕ ನಿರ್ಮಿತ ಔಷಧಿಗಳಿಗೆ ಹೆಚ್ಚುವರಿ ಸುಂಕದಿಂದ ವಿನಾಯಿತಿ ನೀಡಲು ಈಗಾಗಲೇ ನಿರ್ಧರಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ `ಫೈನಾನ್ಶಿಯಲ್ ನ್ಯೂಸ್' ವರದಿ ಮಾಡಿದೆ.
ವಿನಾಯಿತಿಗಳಿಗೆ ಅರ್ಹವಾಗಿರುವ 131 ಸರಕುಗಳ ಪಟ್ಟಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ವಿಶ್ವದ ಎರಡು ಅಗ್ರ ಆರ್ಥಿಕತೆಗಳ ನಡುವಿನ ವ್ಯಾಪಾರ ಸಮರದಿಂದ ಉಂಟಾಗುವ ಆರ್ಥಿಕ ಹಾನಿಯ ಬಗ್ಗೆ ಆರ್ಥಿಕ ತಜ್ಞರು ಕಳವಳ ವ್ಯಕ್ತಪಡಿಸುತ್ತಿರುವಂತೆಯೇ ಅಮೆರಿಕವೂ ಕೆಲವು ಇಲೆಕ್ಟ್ರಾನಿಕ್ಸ್ ವಸ್ತುಗಳ ಆಮದಿಗೆ ಹೆಚ್ಚುವರಿ ಸುಂಕದಿಂದ ವಿನಾಯಿತಿ ನೀಡುವ ಬಗ್ಗೆ ಪರಿಶೀಲನೆ ನಡೆಸುತ್ತಿರುವುದಾಗಿ ಹೇಳಿದೆ.