ರಶ್ಯದ ಹಿತಾಸಕ್ತಿ ರಕ್ಷಣೆಗೆ ನಿರಂತರ ಬೆಂಬಲ: ಚೀನಾ ಘೋಷಣೆ
"ಉಕ್ರೇನ್ ಯುದ್ಧ ಕೊನೆಗೊಳಿಸುವಲ್ಲಿ ರಚನಾತ್ಮಕ ಪಾತ್ರ ವಹಿಸಲು ಸಿದ್ಧ"

PC : PTI
ಮಾಸ್ಕೋ: ಉಕ್ರೇನ್ನಲ್ಲಿನ ಯುದ್ಧವನ್ನು ಕೊನೆಗೊಳಿಸುವಲ್ಲಿ ರಚನಾತ್ಮಕ ಪಾತ್ರ ನಿರ್ವಹಿಸಲು ಚೀನಾ ಸಿದ್ಧವಿದೆ. ಜೊತೆಗೆ, ತನ್ನ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ರಶ್ಯಕ್ಕೆ ಅಚಲ ಬೆಂಬಲ ಮುಂದುವರಿಸುತ್ತದೆ ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಹೇಳಿದ್ದಾರೆ.
ಮಾಸ್ಕೋಗೆ ಆಗಮಿಸಿರುವ ವಾಂಗ್, ದ್ವಿಪಕ್ಷೀಯ ಸಹಕಾರ ಸಂಬಂಧ ಬಲವರ್ಧನೆಯ ನಿಟ್ಟಿನಲ್ಲಿ ರಶ್ಯದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೋವ್ ಮತ್ತು ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆ ಮಾತುಕತೆ ನಡೆಸಿದರು. ಈ ಸಂದರ್ಭ ಮಾತನಾಡಿದ ವ್ಲಾದಿಮಿರ್ ಪುಟಿನ್ `ಅಸ್ಥಿರ ಅಂತರಾಷ್ಟ್ರೀಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕಾರ್ಯತಂತ್ರದ ಸಹಕಾರವನ್ನು ಬಲಪಡಿಸುವ ಬಗ್ಗೆ ಜಗತ್ತಿಗೆ ಬಲವಾದ ಸಂಕೇತಗಳನ್ನು ಕಳುಹಿಸುವುದನ್ನು ರಶ್ಯ ಮತ್ತು ಚೀನಾ ಮುಂದುವರಿಸಬೇಕು' ಎಂದು ಪ್ರತಿಪಾದಿಸಿರುವುದಾಗಿ ರಶ್ಯ ಅಧ್ಯಕ್ಷರ ವಕ್ತಾರರನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಈ ಮಧ್ಯೆ, ಉಕ್ರೇನ್ ಬೇಷರತ್ ಕದನ ವಿರಾಮಕ್ಕೆ ಸಿದ್ಧವಿದೆ. ಆದರೆ ಅನಗತ್ಯ ಷರತ್ತುಗಳನ್ನು ಮುಂದಿಟ್ಟು ಪುಟಿನ್ ಸೌದಿ ಅರೆಬಿಯಾದಲ್ಲಿ ಅಮೆರಿಕ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆಯಲ್ಲಿ ನಡೆದ ಒಪ್ಪಂದವನ್ನು ಉಲ್ಲಂಘಿಸುತ್ತಿದ್ದಾರೆ. ಆದ್ದರಿಂದ ರಶ್ಯದ ವಿರುದ್ಧ ನಿರ್ಬಂಧಗಳನ್ನು ಬಿಗಿಗೊಳಿಸಬೇಕು ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಆಗ್ರಹಿಸಿದ್ದಾರೆ.