ತೈವಾನ್ ಮೇಲೆ ಬಲಪ್ರಯೋಗವನ್ನು ನಿರಾಕರಿಸುವುದಿಲ್ಲ : ಚೀನಾ
PC : PTI
ಬೀಜಿಂಗ್: ತೈವಾನ್ ಮೇಲೆ ಬಲಪ್ರಯೋಗವನ್ನು ತ್ಯಜಿಸುವುದಾಗಿ ಭರವಸೆ ನೀಡುವುದಿಲ್ಲ. ಆದರೆ ಬಾಹ್ಯ ಹಸ್ತಕ್ಷೇಪ ಮತ್ತು ತೈವಾನ್ನಲ್ಲಿ ಕಡಿಮೆ ಸಂಖ್ಯೆಯಲ್ಲಿರುವ ಪ್ರತ್ಯೇಕತಾವಾದಿಗಳನ್ನು ಸಹಿಸುವುದಿಲ್ಲ ಎಂದು ಚೀನಾದ ತೈವಾನ್ ವ್ಯವಹಾರಗಳ ಇಲಾಖೆ ಬುಧವಾರ ಎಚ್ಚರಿಕೆ ನೀಡಿದೆ.
ಪ್ರಜಾಪ್ರಭುತ್ವ ಆಡಳಿತವಿರುವ ತೈವಾನ್ ತನ್ನ ಭೂಪ್ರದೇಶಕ್ಕೆ ಸೇರಿದೆ ಎಂದು ಪ್ರತಿಪಾದಿಸುತ್ತಿರುವ ಚೀನಾ ಸೋಮವಾರ ತೈವಾನ್ ಸುತ್ತುವರಿದು ಬೃಹತ್ ಮಿಲಿಟರಿ ಕವಾಯತು ನಡೆಸಿದೆ. ಈ ಬಗ್ಗೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿರುವ ತೈವಾನ್ ವ್ಯವಹಾರಗಳ ಇಲಾಖೆಯ ವಕ್ತಾರ ಚೆನ್ ಬಿನ್ಹುವಾ `ಶಾಂತಿಯುತ ಪುನರೇಕೀಕರಣ ನಿರೀಕ್ಷೆಗಾಗಿ ಅತ್ಯಂತ ಪ್ರಾಮಾಣಿಕ ಪ್ರಯತ್ನ ಮುಂದುವರಿಸಲು ಬಯಸಿದ್ದೇವೆ. ಆದರೆ ಬಲಪ್ರಯೋಗವನ್ನು ತ್ಯಜಿಸಲು ನಾವು ಎಂದಿಗೂ ಬದ್ಧವಾಗಿರುವುದಿಲ್ಲ' ಎಂದಿದ್ದಾರೆ. ತೈವಾನ್ ಬಳಿ ಎಷ್ಟು ಪಡೆಗಳಿವೆ, ಅದು ಎಷ್ಟು ಶಸ್ತ್ರಾಸ್ತ್ರಗಳನ್ನು ಪಡೆದಿದೆ, ಅಥವಾ ಬಾಹ್ಯ ಶಕ್ತಿಗಳು ಮಧ್ಯಪ್ರವೇಶಿಸುತ್ತವೆಯೇ ಎಂಬುದು ನಮಗೆ ಅಗತ್ಯವಿಲ್ಲ. ಆದರೆ ತೈವಾನ್ ಅಪಾಯವನ್ನು ಆಹ್ವಾನಿಸಲು ಧೈರ್ಯ ಮಾಡಿದರೆ, ಅದು ತನ್ನದೇ ವಿನಾಶವನ್ನು ಆಹ್ವಾನಿಸಿದಂತಾಗುತ್ತದೆ. ರಾಷ್ಟ್ರೀಯ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸುವ ನಮ್ಮ ಕ್ರಮಗಳು ನಿರಂತರ ಮುಂದುವರಿಯುತ್ತದೆ' ಎಂದು ಹೇಳಿದ್ದಾರೆ.
ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ತೈವಾನ್ನ ರಾಷ್ಟ್ರೀಯ ಭದ್ರತಾ ಬ್ಯೂರೊ ಮಹಾನಿರ್ದೇಶಕ ತ್ಸಾಯ್ ಮಿಂಗ್ ಯೆನ್ ` ಚೀನೀ ಕಮ್ಯುನಿಸ್ಟರ ಮಿಲಿಟರಿ ಕವಾಯತು ನಕಾರಾತ್ಮಕ ಪರಿಣಾಮವನ್ನು ಉಂಟು ಮಾಡಿದ್ದು ತೈವಾನ್ಗೆ ಅಂತರಾಷ್ಟ್ರೀಯ ಸಮುದಾಯದ ಬೆಂಬಲವನ್ನು ಹೆಚ್ಚಿಸಿದೆ' ಎಂದಿದ್ದಾರೆ.