2023ರ ನಕ್ಷೆ ಬಿಡುಗಡೆಗೊಳಿಸಿದ ಚೀನಾ: ಅರುಣಾಚಲ ಪ್ರದೇಶ, ಅಕ್ಸೈ ಚಿನ್ ಪ್ರದೇಶಗಳನ್ನು ತನ್ನದೆಂದು ಬಿಂಬಿಸಿದ ಚೀನಾ
ಸಾಂದರ್ಭಿಕ ಚಿತ್ರ (PTI)
ಬೀಜಿಂಗ್ : ಚೀನಾ 2023ರ ತನ್ನ ಪ್ರಮಾಣಿತ ನಕ್ಷೆ (ಸ್ಟಾಂಡರ್ಡ್ ಮ್ಯಾಪ್) ಅನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದ್ದು ಅದರಲ್ಲಿ ಅರುಣಾಚಲ ಪ್ರದೇಶ ಮತ್ತು ಅಕ್ಸೈ ಚಿನ್ ಪ್ರದೇಶವನ್ನು ತನ್ನ ಭೂಭಾಗದಲ್ಲಿ ಚೀನಾ ಸೇರಿಸಿದೆ.
ಆಗಸ್ಟ್ 28ರಂದು ಬಿಡುಗಡೆಗೊಂಡ ನಕ್ಷೆಯಲ್ಲಿ ಭಾರತದ ಭೂಪ್ರದೇಶವಾದ ಹಾಗೂ ಚೀನಾ ಸೌತ್ ಟಿಬೆಟ್ ಎಂದು ಹೇಳಿಕೊಳ್ಳುವ ಅರುಣಾಚಲ ಪ್ರದೇಶ ಹಾಗೂ 1962ರ ಯುದ್ಧದಲ್ಲಿ ಚೀನಾ ಆಕ್ರಮಿಸಿರುವ ಅಕ್ಸೈ ಚಿನ್ ಪ್ರದೇಶವನ್ನು ತನ್ನ ಭೂಭಾಗವೆಂದು ಚೀನಾ ಬಿಂಬಿಸಿದೆ.
ತೈವಾನ್ ಮತ್ತು ವಿವಾದಿತ ಸೌತ್ ಚೈನಾ ಸೀ ಕೂಡ ಚೀನಾದ ಅಧಿಕೃತ ನಕ್ಷೆಯಲ್ಲಿ ಚೀನಾಗೆ ಸೇರಿದ್ದೆಂದು ಬಿಂಬಿಸಲಾಗಿದೆ.
ಸೌತ್ ಚೈನಾ ಸೀ ಪ್ರದೇಶಗಳನ್ನು ಫಿಲಿಪ್ಪೀನ್ಸ್, ವಿಯೆಟ್ನಾಂ, ಮಲೇಷ್ಯಾ, ಬ್ರುನೈ ಕೂಡ ತಮ್ಮದೆಂದು ಹೇಳುತ್ತಿವೆ.
ಚೀನಾದ ನಕ್ಷೆಯನ್ನು ಸೋಮವಾರ ಸರ್ವೇಯಿಂಗ್ ಎಂಡ್ ಮ್ಯಾಪಿಂಗ್ ಪಬ್ಲಿಸಿಟಿ ಡೇ ಮತ್ತು ನ್ಯಾಷನಲ್ ಮ್ಯಾಪಿಂಗ್ ಅವೇರ್ನೆಸ್ ಪಬ್ಲಿಸಿಟಿ ವೀಕ್ ಆಚರಣೆಯ ಅಂಗವಾಗಿ ಝೀಜಿಯಾಂಗ್ ಪ್ರಾಂತ್ಯದ ಡೆಖಿಂಗ್ ಕೌಂಟಿಯಲ್ಲಿ ಚೀನಾದ ನೈಸರ್ಗಿಕ ಸಂಪನ್ಮೂಲಗಳ ಸಚಿವಾಲಯ ಬಿಡುಗಡೆಗೊಳಿಸಿದೆ.
ಈ ವರ್ಷದ ಎಪ್ರಿಲ್ ತಿಂಗಳಿನಲ್ಲಿ ಚೀನಾ ಪರ್ವತ ಶಿಖರ, ನದಿಗಳು ಮತ್ತು ವಸತಿ ಪ್ರದೇಶಗಳ ಸಹಿತ ಭಾರತದ 11 ಸ್ಥಳಗಳನ್ನು ಏಕಪಕ್ಷೀಯವಾಗಿ ಮರುನಾಮಕರಣ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಚೀನಾದ ವಿಸ್ತರಣಾವಾದಿ ಯೋಜನೆಗಳನ್ನು ಆಗ ಭಾರತ ಖಂಡಿಸಿತ್ತು.