ಚೀನಾ | ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿ ಪ್ರಯೋಗ ಯಶಸ್ವಿ
PC : PTI
ಹಾಂಕಾಂಗ್ : ಚೀನಾ ಕಳೆದ ವಾರ ತನ್ನ ಭೂಪ್ರದೇಶದಿಂದ ಪೆಸಿಫಿಕ್ ಮಹಾಸಾಗರಕ್ಕೆ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಉಡಾಯಿಸಿದ್ದು ಇದು 1990ರ ಬಳಿಕದ ಮೊದಲ ಪರೀಕ್ಷೆಯಾಗಿದೆ.
ಆದರೆ ಯುದ್ಧತಂತ್ರದ ದೃಷ್ಟಿಯಿಂದ ಮಹತ್ವದ ಮತ್ತು ನಿರ್ಣಾಯಕವಾದ ಈ ಪ್ರಕ್ರಿಯೆಯನ್ನು ಸಾಮಾನ್ಯ ಘಟನೆ ಎಂಬ ರೀತಿಯಲ್ಲಿ ಚೀನಾ ಸರಕಾರ ಹೇಳಿಕೆ ನೀಡಿದೆ. ` ಪೀಪಲ್ಸ್ ಲಿಬರೇಷನ್ ಆರ್ಮಿ ರಾಕೆಟ್ ಪಡೆ(ಪಿಎಲ್ಎಆರ್ಎಫ್)ಯು ಕಳೆದ ವಾರ ನಕಲಿ ಸಿಡಿತಲೆಯನ್ನು ಹೊತ್ತೊಯ್ಯುವ ಐಸಿಬಿಎಂ ಅನ್ನು ಪೆಸಿಫಿಕ್ ಮಹಾಸಾಗರದ ಗುರಿಯತ್ತ ಪ್ರಯೋಗಿಸಿದೆ. ಈ ಪರೀಕ್ಷಾ ಉಡಾವಣೆಯು ನಮ್ಮ ವಾರ್ಷಿಕ ತರಬೇತಿ ಯೋಜನೆಯನ್ನು ವಾಡಿಕೆಯ ವ್ಯವಸ್ಥೆಯಾಗಿದೆ ಮತ್ತು ಅಂತರರಾಷ್ಟ್ರೀಯ ಕಾನೂನು ಹಾಗೂ ಅಂತರಾಷ್ಟ್ರೀಯ ಆಚರಣೆ(ರೂಢಿ)ಗೆ ಅನುಗುಣವಾಗಿದೆ ಮತ್ತು ಯಾವುದೇ ದೇಶ ಅಥವಾ ಗುರಿಯ ವಿರುದ್ಧ ನಿರ್ದೇಶಿಸಲ್ಪಟ್ಟಿಲ್ಲ' ಎಂದು ಚೀನಾದ ರಾಷ್ಟ್ರೀಯ ರಕ್ಷಣಾ ಸಚಿವಾಲಯದ ಹೇಳಿಕೆ ತಿಳಿಸಿದೆ. ಫ್ರಾನ್ಸ್, ಅಮೆರಿಕ ಸೇರಿದಂತೆ ಕೆಲವು ಆಯ್ದ ದೇಶಗಳಿಗೆ ಎಚ್ಚರಿಕೆ ನೀಡಲು ಈ ಕ್ರಮವನ್ನು ಚೀನಾ ಬಳಸಿದೆ ಎಂದು ವಿಶ್ಲೇಷಿಸಲಾಗಿದೆ.
ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆಯ ಬಗ್ಗೆ ಕೆಲವು ಮುಂಗಡ ಅಧಿಸೂಚನೆಗಳನ್ನು ಸ್ವೀಕರಿಸಿದ್ದೇವೆ ಮತ್ತು ಅದು ಒಳ್ಳೆಯದು ಎಂದು ನಾವು ನಂಬುತ್ತೇವೆ. ಇದು ಸರಿಯಾದ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿದೆ ಮತ್ತು ಯಾವುದೇ ತಪ್ಪು ಗ್ರಹಿಕೆ ಮತ್ತು ತಪ್ಪು ಲೆಕ್ಕಾಚಾರವನ್ನು ತಡೆಯಲು ಕಾರಣವಾಗುತ್ತದೆ ಎಂದು ಅಮೆರಿಕದ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.
ಬ್ಯಾಲಿಸ್ಟಿಕ್ ಕ್ಷಿಪಣಿ ಪ್ರಯೋಗದ ಬಗ್ಗೆ ಪರಸ್ಪರ ಮಾಹಿತಿ ನೀಡುವುದಕ್ಕೆ ಸಂಬಂಧಿಸಿ ಚೀನಾವು ರಶ್ಯದೊಂದಿಗೆ 2009ರಲ್ಲಿ ಒಪ್ಪಂದ ಮಾಡಿಕೊಂಡಿದೆ. ಆದರೆ ಅಮೆರಿಕದ ಜತೆ ಇಂತಹ ಒಪ್ಪಂದವನ್ನು ತಿರಸ್ಕರಿಸಿದೆ.