ಬೈಡೆನ್ ಆಡಳಿತದಲ್ಲಿ ಚೀನಾ ಅಮೆರಿಕವನ್ನು ‘ಕೊಲ್ಲುತ್ತಿದೆ’: ಟ್ರಂಪ್
ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಬೈಡೆನ್-ಟ್ರಂಪ್ ಚೊಚ್ಚಲ ಟಿವಿ ಚರ್ಚಾ ಕಾರ್ಯಕ್ರಮ
ಜೋ ಬೈಡೆನ್ , ಡೊನಾಲ್ಡ್ ಟ್ರಂಪ್ | PTI
ಬೀಜಿಂಗ್ : ಚೀನಾವು ಅಮೆರಿಕವನ್ನು ಕೊಲ್ಲುತ್ತಿದೆ ಎಂದು ಅಮೆರಿಕ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಗುರುವಾರ ಆಪಾದಿಸಿದ್ದು, ಹಾಲಿ ಅಧ್ಯಕ್ಷ ಜೋ ಬೈಡೆನ್ ಅವರು ಜಗತ್ತನ್ನು ಯುದ್ಧದ ಸನಿಹಕ್ಕೆ ಕೊಂಡೊಯ್ಯುತ್ತಿದ್ದಾರೆ ಎಂದು ಹೇಳಿದ್ದಾರೆ.
ನವೆಂಬರ್ನಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಹಿನ್ನೆಲೆಯಲ್ಲಿ ಗುರುವಾರ ಸಂಜೆ ಬೈಡನ್ ಜೊತೆ ನಡೆದ ಚರ್ಚಾ ಕೂಟದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಅವರು (ಚೀನಾ) ನಮ್ಮ ದೇಶಕ್ಕೆ ಈಗ ಏನು ಮಾಡುತ್ತಿದ್ದಾರೆಯೋ ಅದಕ್ಕೆ ಅವಕಾಶ ನೀಡುತ್ತಲೇ ಇದ್ದಲ್ಲಿ ಚೀನಾವು ನಮ್ಮ ಮೇಲೆ ಯಜಮಾನಿಕೆ ನಡೆಸಲಿದೆ’’ ಎಂದು ಟ್ರಂಪ್ ಬೈಡನ್ ಅವರಿಗೆ ತಿಳಿಸಿದರು.
‘‘ ಅವರು ನಮ್ಮ ದೇಶವನ್ನು ಕೊಲ್ಲುತ್ತಿದ್ದಾರೆ. ಜೋ (ಬೈಡನ್)ಅವರೇ, ನೀವು ಇದಕ್ಕೆ ಅವಕಾಶ ನೀಡಬಾರದು. ನಮ್ಮ ದೇಶವನ್ನು ನೀವು ನಾಶಪಡಿಸುತ್ತಿದ್ದೀರಿ’’ ಎಂದು ಟ್ರಂಪ್ ಅವರು ಅಮೆರಿಕ ಅಧ್ಯಕ್ಷರ ವಿರುದ್ಧ ಕಿಡಿಕಾರಿದರು.
ಬೈಡನ್ ಅವರ ಮಿಲಿಟರಿ ನೀತಿಗಳು ಹುಚ್ಚುತನದ್ದಾಗಿದೆ ಎಂದು ಹೇಳಿದ ಟೀಕಿಸಿದ ಅವರು, ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್, ರಶ್ಯನ್ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಉತ್ತರ ಕೊರಿಯಾ ವರಿಷ್ಠ ಕಿಮ್ ಜೊಂಗ್ ಉನ್ ಅವರಿಗೆ, ಅಮೆರಿಕದ ಅಧ್ಯಕ್ಷರ ಬಗ್ಗೆ ಗೌರವವಾಗಲಿ ಅಥವಾ ಭಯವಾಗಲಿ ಇಲ್ಲವೆಂದು ಹೇಳಿದರು.
ತನ್ನ ಭಾಷಣದುದ್ದಕ್ಕೂ ಬೈಡನ್ರನ್ನು ತರಾಟೆಗೆ ತೆಗೆದುಕೊಂಡ ಅವರು ಈ ಸಭ್ಯ ಮನುಷ್ಯನ ಜೊತೆ ಅವರಿಗೆ ಆಗಬೇಕಾಗಿರುವುದೇನೂ ಇಲ್ಲ. ಆದರೆ ಈತ ನಮ್ಮನ್ನು ಮೂರನೇ ಜಾಗತಿಕ ಮಹಾಯುದ್ಧದೆಡೆಗೆ ಸೆಳೆದೊಯ್ಯುತ್ತಿದ್ದಾನೆ ಎಂದರು.
ಸಿಎನ್ಎನ್ ಸುದ್ದಿ ವಾಹಿನಿ ಆಯೋಜಿಸಿದ ಟಿವಿ ಸಂವಾದ ಕಾರ್ಯಕ್ರಮದಲ್ಲಿ ಜೋ ಬೈಡನ್ ಹಾಗೂ ಟ್ರಂಪ್ ಇಬ್ಬರೂ ಚೀನಾದ ವಿರುದ್ಧ ತಾವು ಕಠಿಣವಾದ ನಿಲುವುಗಳನ್ನು ಹೊಂದಿರುವ ಹಾಗೆ ತಮ್ಮನ್ನು ತೋರ್ಪಡಿಸಿಕೊಳ್ಳಲು ಯತ್ನಿಸಿದರು. ಅಮೆರಿಕನ್ನರ ಉದ್ಯೋಗಗಳನ್ನು ರಕ್ಷಿಸಲು ತಾವು ದಿಟ್ಟ ಹೆಜ್ಜೆಗಳನ್ನು ಇಡುವ ಇಂಗಿತವನ್ನು ಅವರು ವ್ಯಕ್ತಪಡಿಸಿದರು.
ಬೈಡನ್ ಅವರೊಬ್ಬ ಚೀನಾದ ಏಜೆಂಟ್ ಎಂಬುದಾಗಿ ಟ್ರಂಪ್ ಆಪಾದಿಸಿದ್ದರಾದರೂ, ಅದನ್ನು ಸಮರ್ಥಿಸುವ ಯಾವುದೇ ಪುರಾವೆಗಳನ್ನು ಅವರು ಒದಗಿಸಲಿಲ್ಲ.
ತನ್ನ ವಿರುದ್ಧ ಟ್ರಂಪ್ ಮಾಡಿದ ಆರೋಪಗಳನ್ನು ಅಲ್ಲಗಳೆದ ಬೈಡನ್ ಅವರು 2010ರಿಂದೀಚೆಗೆ ಅಮೆರಿಕವು ತನ್ನ ಆಡಳಿತದಲ್ಲಿ ಚೀನಾದ ಜೊತೆ ಅತ್ಯಂತ ಕಡಿಮೆ ವಾಣಿಜ್ಯ ಕೊರತೆಯನ್ನು ಹೊಂದಿದೆಯೆಂದು ಆಪಾದಿಸಿದರು. ಆದರೆ ಟ್ರಂಪ್ ಅವರ ಅಡಳಿತದ ಅವಧಿಯಲ್ಲಿ ಚೀನಾದ ಜೊತೆಗಿನ ವಿತ್ತೀಯ ಕೊರತೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಯಾವುದೇ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗಲಿಲ್ಲವೆಂದು ಅವರು ಹೇಳಿದರು.
ಕಳೆದ ವರ್ಷ ಚೀನಾದ ಜೊತೆ ಅಮೆರಿಕದ ವಿತ್ತೀಯ ಕೊರತೆಯು 279 ಶತಕೋಟಿ ಡಾಲರ್ ಆಗಿದ್ದಾಗಿ ಅಮೆರಿಕ ಗಣತಿ ಬ್ಯೂರೋದ ಅಂಕಿಅಂಶಗಳು ತಿಳಿಸಿದ್ದು, ಇದು 2010ರಿಂದೀಚೆಗೆ ಅತ್ಯಂತ ಕನಿಷ್ಠವಾದುದಾಗಿದೆ. ಟ್ರಂಪ್ ಅವಧಿಯಲ್ಲಿ ಚೀನಾದ ಜೊತೆಗೆ ಅಮೆರಿಕದ ವಿತ್ತೀಯ ಕೊರತೆಯು 418 ಶತಕೋಟಿ ಡಾಲರ್ಗಳಾಗಿತ್ತು.
ಟ್ರಂಪ್ ಅಧ್ಯಕ್ಷರಾಗಿದ್ದಾಗ ಚೀನಿ ಸಾಮಾಗ್ರಿಗಳ ಆಮದಿನ ಪ್ರಮಾಣವನ್ನು ಹೆಚ್ಚಿಸಿದ್ದರೆಂದು ಆಪಾದಿಸಿದ ಬೈಡನ್, ತನ್ನ ಅಧಿಕಾರಾವಧಿಯಲ್ಲಿ ಚೀನಾದ ಇಲೆಕ್ಟ್ರಿಕ್ ವಾಹನಗಳ ಮೇಲೆ 100 ಶೇ. ತೆರಿಗೆ ವಿಧಿಸಿರುವುದಾಗಿ ತಿಳಿಸಿದರು.
*ಬೈಡನ್ ಪ್ರತ್ಯಾರೋಪಗಳು
ಟ್ರಂಪ್ಗೆ ಅವರು ಏನು ಮಾತನಾಡುತ್ತಿದ್ದೆರೆ ಎಂಬುದೇ ಗೊತ್ತಿಲ್ಲ. ಅವರಂತಹ ಮೂರ್ಖತನದ ಮಾತುಗಳನ್ನು ನಾನು ಹಿಂದೆಂದೂ ಕೇಳಿಲ್ಲ. ಟ್ರಂಪ್ ಅವರು ನ್ಯಾಟೊ ಮೈತ್ರಿಕೂಟದಿಂದ ಹೊರ ಬರಲು ಬಯಸುತ್ತಿದ್ದಾರೆ.
ಸಾರ್ವಜನಿಕವಾಗಿ ಮಹಿಳೆಯರಿಗೆ ಕಿರುಕುಳ ನೀಡಿದ್ದಕ್ಕಾಗಿ ಎಷ್ಟು ಬಿಲಿಯ ಡಾಲರ್ ದಂಡ ಪಾವತಿಯನ್ನು ಬಾಕಿಯಿರಿಸಿದ್ದೀರಿ.
ಟ್ರಂಪ್ ಅವರಿಗೆ ಅಮೆರಿಕನ್ ಪ್ರಜಾಪ್ರಭುತ್ವದ ಬಗ್ಗೆ ಪ್ರಜ್ಞೆಯೇ ಇಲ್ಲ.
*ಟ್ರಂಪ್ ವಾಗ್ದಾಳಿ
ಬೈಡನ್ ಅವರ ವಲಸೆ ನೀತಿಗಳು ಅಮೆರಿಕವನ್ನು ಅಸುರಕ್ಷಿತಗೊಳಿಸಿದೆ.
ವಸ್ತುಶಃ ನಾವೀಗ ಅನಾಗರಿಕ ದೇಶವಾಗಿದ್ದೇವೆ. ಹಿಂದೆಂದೂ ಕಾಣದಂತಹ ರೀತಿಯಲ್ಲಿ ಬೈಡನ್ ಅವರು ದೇಶದ ಗಡಿಗಳನ್ನು ತೆರೆದಿಟ್ಟಿದ್ದಾರೆ. ಹಲವಾರು ವಲಸಿಗರನ್ನು ಹೊರತಳ್ಳಬೇಕಾಗಿದೆ. ಇಲ್ಲದೇ ಇದ್ದಲ್ಲಿ ಅವರು ನಮ್ಮ ದೇಶವನ್ನು ನಾಶಪಡಿಸಲಿದ್ದಾರೆ.
ಅಕ್ರಮ ವಲಸಿಗರು ನ್ಯೂಯಾರ್ಕ್ ನಗರ ಮತ್ತಿತರ ಸ್ಥಳಗಳಲ್ಲಿನ ಐಷಾರಾಮಿ ಹೊಟೇಲ್ಗಳಲ್ಲಿ ವಾಸವಾಗಿದ್ದರೆ, ನಮ್ಮ ಹಿರಿಯ ಯೋಧರು ಬೀದಿಪಾಲಾಗಿದ್ದಾರೆ.