ಗಾಝಾ ಕದನವಿರಾಮ ಕುರಿತ ಅಮೆರಿಕ ಬೆಂಬಲಿತ ನಿರ್ಣಯಕ್ಕೆ ಚೀನಾ, ರಶ್ಯ ವೀಟೊ ಪ್ರಯೋಗ
ವಿಶ್ವಸಂಸ್ಥೆ : ಗಾಝಾದಲ್ಲಿ ಕದನ ವಿರಾಮ ಜಾರಿಗೆ ಸಂಬಂಧಿಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಅಮೆರಿಕ ಮಂಡಿಸಿದ ನಿರ್ಣಯವನ್ನು ರಶ್ಯ ಮತ್ತು ಚೀನಾ ವೀಟೊ ಬಳಸಿ ತಡೆಹಿಡಿದಿದ್ದು, ಇಸ್ರೇಲ್ ಮೇಲೆ ಒತ್ತಡ ಹೇರದ ಈ ನಿರ್ಣಯ ಅಮೆರಿಕದ ಕಪಟ ನಾಟಕವನ್ನು ಬಯಲುಪಡಿಸಿದೆ ಎಂದು ಟೀಕಿಸಿವೆ.
ಭದ್ರತಾ ಮಂಡಳಿಯ 15 ಸದಸ್ಯರಲ್ಲಿ 11 ಸದಸ್ಯರು ನಿರ್ಣಯದ ಪರ, ಮೂರು ವಿರುದ್ಧವಾಗಿ ಮತ ಚಲಾಯಿಸಿದರೆ ಒಂದು ದೇಶದ ಸದಸ್ಯರು ಮತದಾನದಲ್ಲಿ ಭಾಗವಹಿಸಲಿಲ್ಲ. `ಎಲ್ಲಾ ನಾಗರಿಕರ ರಕ್ಷಣೆಗೆ, ಅಗತ್ಯದ ನೆರವು ಪೂರೈಕೆಗೆ ಪೂರಕವಾಗಿ ಗಾಝಾದಲ್ಲಿ ತಕ್ಷಣದ ಮತ್ತು ಶಾಶ್ವತ ಕದನವಿರಾಮ ಅನಿವಾರ್ಯವಾಗಿದೆ' ಎಂದು ಕರಡು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.
`ಆದರೆ ಕರಡು ನಿರ್ಣಯದಲ್ಲಿ ಅನಿವಾರ್ಯ ಎಂಬ ಪದ ಬಳಸುವ ಮೂಲಕ ಅಮೆರಿಕ ಭದ್ರತಾ ಮಂಡಳಿಗೆ ಒಂದು ಉತ್ಪನ್ನವನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದೆ. ಭದ್ರತಾ ಮಂಡಳಿ ಕದನ ವಿರಾಮವನ್ನು ಆಗ್ರಹಿಸಬೇಕು. ಇನ್ನಷ್ಟು ಕಠಿಣ ಪದ ಬಳಸಿ ಇಸ್ರೇಲ್ನ ಮೇಲೆ ಒತ್ತಡ ಹೇರಬೇಕು. 30,000ಕ್ಕೂ ಅಧಿಕ ಗಾಝಾ ನಿವಾಸಿಗಳು ಹತರಾದ ಬಳಿಕ ಅಮೆರಿಕಕ್ಕೆ ಕದನ ವಿರಾಮದ ಅಗತ್ಯ ಮನವರಿಕೆಯಾಗಿದೆ' ಎಂದು ರಶ್ಯದ ರಾಯಭಾರಿ ವ್ಯಾಸಿಲಿ ನೆಬೆಂಝಿಯಾ ಟೀಕಿಸಿದ್ದಾರೆ.