ಇಸ್ರೇಲ್ ಆತ್ಮರಕ್ಷಣೆಯ ವ್ಯಾಪ್ತಿ ಮೀರಿ ವರ್ತಿಸುತ್ತಿದೆ ; ಚೀನಾ
ಬೀಜಿಂಗ್ : ಗಾಝಾದಲ್ಲಿ ಇಸ್ರೇಲ್ ನ ಕೃತ್ಯಗಳು ಆತ್ಮರಕ್ಷಣೆಯ ವ್ಯಾಪ್ತಿಯನ್ನು ಮೀರಿದೆ. ಗಾಝಾದಲ್ಲಿನ ಜನರನ್ನು ಸಾಮೂಹಿಕವಾಗಿ ಶಿಕ್ಷಿಸುವ ಕಾರ್ಯದಿಂದ ಇಸ್ರೇಲ್ ಸರಕಾರ ಹಿಂದೆ ಸರಿಯಬೇಕು ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ರವಿವಾರ ಹೇಳಿದ್ದಾರೆ.
ಗಾಝಾದಲ್ಲಿನ ಹಮಾಸ್ ಹೋರಾಟಗಾರರ ವಿರುದ್ಧ ನೆಲದ ಮೇಲಿನ ಆಕ್ರಮಣಕ್ಕೆ ಇಸ್ರೇಲ್ ಸಿದ್ಧಗೊಳ್ಳುತ್ತಿರುವ ನಡುವೆಯೇ ವಾಂಗ್ ಯಿ ಸೌದಿ ಅರೆಬಿಯಾದ ವಿದೇಶಾಂಗ ಸಚಿವ ಫೈಸಲ್ ಬಿನ್ ಫರ್ಹಾನ್ ಗೆ ಕರೆ ಮಾಡಿ ಇಸ್ರೇಲ್-ಹಮಾಸ್ ಸಂಘರ್ಷದ ಬಗ್ಗೆ ಚರ್ಚೆ ನಡೆಸಿದರು. ಬಳಿಕ ಮಾಧ್ಯಮಗಳಿಗೆ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ವಾಂಗ್ ಯಿ `ಇಸ್ರೇಲ್ ಅಂತರಾಷ್ಟ್ರೀಯ ಸಮುದಾಯ ಮತ್ತು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಯ ಕರೆಗಳನ್ನು ಪ್ರಾಮಾಣಿಕವಾಗಿ ಆಲಿಸಬೇಕು ಮತ್ತು ಗಾಝಾ ಜನತೆಯ ಸಾಮೂಹಿಕ ಶಿಕ್ಷೆಯ ಕೃತ್ಯವನ್ನು ಸ್ಥಗಿತಗೊಳಿಸಬೇಕು. ಫೆಲೆಸ್ತೀನ್ ರಾಷ್ಟ್ರದ ನ್ಯಾಯಯುತ ಬೇಡಿಕೆಗೆ ನಮ್ಮ ಬೆಂಬಲವಿದೆ' ಎಂದು ಹೇಳಿದ್ದಾರೆ.
ಶನಿವಾರ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಅಂಥೋನಿ ಬ್ಲಿಂಕೆನ್ ಗೆ ಕರೆ ಮಾಡಿದ್ದ ವಾಂಗ್ಯಿ, ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ಅಮೆರಿಕ ರಚನಾತ್ಮಕ ಮತ್ತು ಜವಾಬ್ದಾರಿಯುತ ಪಾತ್ರ ನಿರ್ವಹಿಸಬೇಕು ಮತ್ತು ವಿಶಾಲ ಒಮ್ಮತವನ್ನು ರೂಪಿಸಲು ಸಾಧ್ಯವಾದಷ್ಟು ಬೇಗ ಅಂತರಾಷ್ಟ್ರೀಯ ಶಾಂತಿ ಸಭೆಯನ್ನು ಕರೆಯುವಂತೆ ಆಗ್ರಹಿಸಿದ್ದರು.
ಈ ಮಧ್ಯೆ, ಹಿಂಸಾಚಾರವನ್ನು ಖಂಡಿಸುವಾಗ ಹಮಾಸ್ ನ ಬಗ್ಗೆ ಯಾವುದೇ ಉಲ್ಲೇಖ ಮಾಡದ ಚೀನಾದ ಹೇಳಿಕೆಯನ್ನು ಪಾಶ್ಚಿಮಾತ್ಯ ದೇಶಗಳ ಮುಖಂಡರು ಟೀಕಿಸಿದ್ದಾರೆ.