6 ತಿಂಗಳ ಬಳಿಕ ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಗೆ ಮರಳಿದ ಚೀನಾದ ಗಗನಯಾತ್ರಿಗಳು
ಯೆ ಗ್ವಾಂಗ್ಫು, ಲಿ ಕಾಂಗ್ ಮತ್ತು ಲಿ ಗ್ವಾಂಗ್ಸು PC : AP
ಬೀಜಿಂಗ್ : ಕಳೆದ 6 ತಿಂಗಳಿಂದ ಚೀನಾದ ಕೆಳಕಕ್ಷೆಯ ಬಾಹ್ಯಾಕಾಶ ನಿಲ್ದಾಣದ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಚೀನಾದ ಮೂವರು ಗಗನಯಾತ್ರಿಗಳು ಸುರಕ್ಷಿತವಾಗಿ ಭೂಮಿಗೆ ಮರಳಿರುವುದಾಗಿ ಚೀನಾದ ಮಾನವ ಸಹಿತ ಬಾಹ್ಯಾಕಾಶ ಏಜೆನ್ಸಿ(ಸಿಎಂಸಿಎ) ಸೋಮವಾರ ಹೇಳಿದೆ.
ಅಂತರಿಕ್ಷದಲ್ಲಿ 192 ದಿನಗಳನ್ನು ಕಳೆದ ಬಳಿಕ ಗಗನ ಯಾತ್ರಿಗಳಾದ ಯೆ ಗ್ವಾಂಗ್ಫು, ಲಿ ಕಾಂಗ್ ಮತ್ತು ಲಿ ಗ್ವಾಂಗ್ಸುರನ್ನು ಕರೆತಂದ ಶೆಂಝೌ-18 ಬಾಹ್ಯಾಕಾಶ ನೌಕೆಯು ಉತ್ತರ ಚೀನಾದ ಇನ್ನರ್ ಮಂಗೋಲಿಯಾ ಸ್ವಾಯತ್ತ ಪ್ರದೇಶದಲ್ಲಿನ ಡಾಂಗ್ಫೆಂಗ್ ಕೇಂದ್ರದಲ್ಲಿ ಸೋಮವಾರ ಬೆಳಿಗ್ಗೆ 1:24 ಗಂಟೆಗೆ ಭೂಮಿಯನ್ನು ಸುರಕ್ಷಿತವಾಗಿ ತಲುಪಿದೆ. ಮೂವರೂ ಆರೋಗ್ಯವಾಗಿದ್ದಾರೆ ಎಂದು ಸಿಎಂಎಸ್ಎ ಹೇಳಿದೆ.
ಎಪ್ರಿಲ್ನಲ್ಲಿ ಶೆಂಝೌ-18 ಗಗನ ನೌಕೆ ಬಾಹ್ಯಾಕಾಶಕ್ಕೆ ನೆಗೆದಿತ್ತು. ಈ ಕಾರ್ಯಕ್ರಮದ ಸಂದರ್ಭ ಗಗನಯಾತ್ರಿಗಳು ವೈಜ್ಞಾನಿಕ ಪ್ರಯೋಗದ ಕ್ಯಾಬಿನೆಟ್ಗಳು ಮತ್ತು ಇತರ ಸಾಧನಗಳನ್ನು ಬಳಸಿ ಬಾಹ್ಯಾಕಾಶ ಜೀವ ವಿಜ್ಞಾನ, ಬಾಹ್ಯಾಕಾಶ ವಸ್ತುವಿಜ್ಞಾನ, ಬಾಹ್ಯಾಕಾಶ ಔಷಧ, ಬಾಹ್ಯಾಕಾಶ ತಂತ್ರಜ್ಞಾನ, ಬಾಹ್ಯಾಕಾಶದಲ್ಲಿನ ಗುರುತ್ವಾಕರ್ಷಣೆಯ ಪರಿಸ್ಥಿತಿಗಳ ಕ್ಷೇತ್ರದಲ್ಲಿ ಹಲವು ಪ್ರಯೋಗಗಳನ್ನು ನಡೆಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಕ್ಸಿನ್ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ.
ಈ ಗಗನಯಾತ್ರಿಗಳ ಸ್ಥಾನದಲ್ಲಿ ಮಹಿಳೆ ಸೇರಿದಂತೆ ಮೂವರು ಹೊಸ ಗಗನಯಾತ್ರಿಗಳ ತಂಡವನ್ನು ಚೀನಾ ಅಕ್ಟೋಬರ್ 30ರಂದು ಬಾಹ್ಯಾಕಾಶ ನಿಲ್ದಾಣಕ್ಕೆ ತಲುಪಿಸಿದೆ. ಪ್ರತೀ 6 ತಿಂಗಳಿಗೊಮ್ಮೆ ಬಾಹ್ಯಾಕಾಶ ನಿಲ್ದಾಣದಲ್ಲಿನ ಗಗನ ಯಾತ್ರಿಗಳನ್ನು ಚೀನಾ ಬದಲಾಯಿಸುತ್ತಿದೆ.