ತೈವಾನ್ನೊಂದಿಗೆ ಶಾಂತಿಯುತ ಪುನರ್ ಏಕೀಕರಣಕ್ಕೆ ಹೆಚ್ಚಿನ ಪ್ರಯತ್ನ: ಚೀನಾ ಪ್ರತಿಜ್ಞೆ

Photo Credit | PTI
ಬೀಜಿಂಗ್: ತೈವಾನ್ನೊಂದಿಗೆ ಶಾಂತಿಯುತ ಪುನರೇಕೀಕರಣದ ನಿಟ್ಟಿನಲ್ಲಿ ಚೀನಾ ಹೆಚ್ಚಿನ ಪ್ರಯತ್ನಗಳನ್ನು ಮುಂದುವರಿಸುತ್ತದೆ. ಇದೇ ವೇಳೆ ಚೀನಾದ ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನೂ ತೆಗೆದುಕೊಳ್ಳುತ್ತದೆ ಎಂದು ಚೀನಾದ ವಿದೇಶಾಂಗ ಇಲಾಖೆ ಸೋಮವಾರ ಹೇಳಿದೆ.
ತೈವಾನ್ ಒಂದು ರಾಷ್ಟ್ರವಾಗಲು ಯಾವತ್ತೂ ಸಾಧ್ಯವಿಲ್ಲ ಮತ್ತು ತೈವಾನ್ನ `ಸ್ವಾತಂತ್ರ್ಯ'ವನ್ನು ಬೆಂಬಲಿಸುವುದು ಚೀನಾದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪವಾಗಿದೆ ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಹೇಳಿದ್ದಾರೆ.
ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆಯಿರುವ ತೈವಾನ್ ತನ್ನದೇ ಪ್ರದೇಶ ಎಂದು ಚೀನಾ ಪ್ರತಿಪಾದಿಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ತೈವಾನ್ ಜಲಸಂಧಿಯಲ್ಲಿ ಹಲವು ಸುತ್ತುಗಳ ಸಮರಾಭ್ಯಾಸ ಸೇರಿದಂತೆ ತೈವಾನ್ ವಿರುದ್ಧದ ಮಿಲಿಟರಿ ಒತ್ತಡವನ್ನು ಚೀನಾ ಹೆಚ್ಚಿಸಿದೆ. ಅಧಿಕೃತ ರಾಜತಾಂತ್ರಿಕ ಸಂಬಂಧ ಹೊಂದಿಲ್ಲದಿದ್ದರೂ ಅಮೆರಿಕ ತೈವಾನ್ಗೆ ಶಸ್ತ್ರಾಸ್ತ್ರ ಪೂರೈಸುವ ಪ್ರಮುಖ ದೇಶವಾಗಿ ಗುರುತಿಸಿಕೊಂಡಿದೆ.
ತೈವಾನ್ಗೆ ಶಸ್ತ್ರಾಸ್ತ್ರ ಮಾರಾಟವನ್ನು ಮತ್ತು ಅದರೊಂದಿಗೆ ಎಲ್ಲಾ ಮಿಲಿಟರಿ ಸಂಪರ್ಕವನ್ನು ಅಮೆರಿಕ ನಿಲ್ಲಿಸಬೇಕು. ತೈವಾನ್ ವಿಷಯವು ಚೀನಾದ ಪ್ರಮುಖ ಹಿತಾಸಕ್ತಿಗೆ ಸಂಬಂಧಿಸಿದ್ದು ಚೀನಾ-ಅಮೆರಿಕ ಸಂಬಂಧಗಳಲ್ಲಿ ದಾಟಲಾಗದ ಮೊದಲ ಕೆಂಪು ಗೆರೆಯಾಗಿದೆ ಎಂದು ಚೀನಾ ವಿದೇಶಾಂಗ ಇಲಾಖೆಯ ವಕ್ತಾರೆ ಮಾವೊ ನಿಂಗ್ ಹೇಳಿದ್ದಾರೆ.