ಚೀನಾ | ಉನ್ನತ ಸೇನಾಧಿಕಾರಿ ಮಿಯಾವೊ ಹುವಾ ಅಮಾನತು
ಮಿಯಾವೊ ಹುವಾ | PC : aljazeera.com
ಬೀಜಿಂಗ್ : ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಉನ್ನತ ಸೇನಾಧಿಕಾರಿ ಮಿಯಾವೊ ಹುವಾರನ್ನು ಅಮಾನತುಗೊಳಿಸಿರುವುದಾಗಿ ವರದಿಯಾಗಿದೆ.
ಶಿಸ್ತಿನ ಗಂಭೀರ ಉಲ್ಲಂಘನೆಗಾಗಿ ಮಿಯಾವೊ ಹುವಾರನ್ನು ವಿಚಾರಣೆ ಬಾಕಿಯಿರಿಸಿ ಕರ್ತವ್ಯದಿಂದ ಅಮಾನತುಗೊಳಿಸಲು ಆಡಳಿತಾರೂಢ ಚೀನಾ ಕಮ್ಯುನಿಸ್ಟ್ ಪಾರ್ಟಿ ನಿರ್ಧರಿಸಿದೆ ಎಂದು ಚೀನಾದ ರಕ್ಷಣಾ ಇಲಾಖೆಯ ವಕ್ತಾರ ವು ಕ್ವಿಯಾನ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಅಡ್ಮಿರಲ್ ಹುದ್ದೆಯಲ್ಲಿರುವ ಮಿಯಾವೊ ಚೀನಾದ ಪ್ರಭಾವೀ `ಸೆಂಟ್ರಲ್ ಮಿಲಿಟರಿ ಕಮಿಷನ್(ಸಿಎಂಸಿ)ಯ ಸದಸ್ಯನಾಗಿದ್ದಾರೆ ಮತ್ತು ಸಿಎಂಸಿಯ ಅತ್ಯಂತ ಪ್ರಮುಖ ವಿಭಾಗ ` ರಾಜಕೀಯ ಕಾರ್ಯ ವಿಭಾಗದ' ಮುಖ್ಯಸ್ಥರಾಗಿದ್ದಾರೆ. ಅವರ ವಿರುದ್ಧದ ಆರೋಪದ ಬಗ್ಗೆ ಹೆಚ್ಚಿನ ವಿವರವನ್ನು ನೀಡಿಲ್ಲ.
ರಕ್ಷಣಾ ಸಚಿವ ಡಾಂಗ್ ಜುನ್ರನ್ನೂ ಭ್ರಷ್ಟಾಚಾರ ಆರೋಪದಡಿ ವಿಚಾರಣೆಗೆ ಒಳಪಡಿಸಲಾಗುತ್ತಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ವು ಕ್ವಿಯಾನ್ ` ವದಂತಿ ಹಬ್ಬುತ್ತಿರುವವರು ದುರುದ್ದೇಶದಿಂದ ಕೂಡಿರುತ್ತಾರೆ. ಇಂತಹ ಸುಳ್ಳುಸುದ್ಧಿ ಹಬ್ಬಿಸುವವರ ಬಗ್ಗೆ ಸರಕಾರ ಅಸಮಾಧಾನ ಹೊಂದಿದೆ' ಎಂದು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.