ಚುನಾವಣೆಯಲ್ಲಿ ಹಸ್ತಕ್ಷೇಪಕ್ಕೆ ಚೀನಾ ಪ್ರಯತ್ನ: ತೈವಾನ್ ಆರೋಪ
Photo : ಜೋಸೆಫ್ ವು | PTI
ತೈಪೆ: ತೈವಾನ್ ನಲ್ಲಿ ಮುಂಬರುವ ಸಾರ್ವತ್ರಿಕ ಚುನಾವಣೆಯ ಫಲಿತಾಂಶವನ್ನು ತನಗೆ ಅನುಕೂಲಕರ ಆಗುವ ರೀತಿಯಲ್ಲಿ ರೂಪಿಸಲು ಚೀನಾ ಪ್ರಯತ್ನಿಸುತ್ತಿದೆ. ಆದರೆ ನಮ್ಮ ದೇಶದ ಭವಿಷ್ಯವನ್ನು ನಿರ್ಧರಿಸುವವರು ಇಲ್ಲಿನ ಜನತೆ, ನೆರೆದೇಶದ ಸರ್ವಾಧಿಕಾರಿಗಳಲ್ಲ ಎಂದು ತೈವಾನ್ ನ ವಿದೇಶಾಂಗ ಸಚಿವ ಜೋಸೆಫ್ ವು ಹೇಳಿದ್ದಾರೆ.
ತೈವಾನ್ನ ಮುಂಬರುವ ಸಾರ್ವತ್ರಿಕ ಚುನಾವಣೆಯನ್ನು ರೂಪಿಸಲು ಚೀನಾ ಬಯಸಿರುವುದು ಸ್ಪಷ್ಟವಾಗಿದೆ ಎಂದವರು ಹೇಳಿದ್ದಾರೆ. ದ್ವೀಪರಾಷ್ಟ್ರ ತೈವಾನ್ ನ ಸುತ್ತ ಮತ್ತೆ ಚೀನಾ ಮಿಲಿಟರಿ ಕವಾಯತು ಆರಂಭಿಸಿರುವ ಬಗ್ಗೆ ಸಚಿವ ವು ಪ್ರತಿಕ್ರಿಯೆ ನೀಡುತ್ತಿದ್ದರು.
ತೈವಾನ್ ದ್ವೀಪದ ಸುತ್ತಲೂ ನೌಕಾಪಡೆ ಮತ್ತು ವಾಯುಪಡೆಯ ಜಂಟಿ ವಾಯು ಮತ್ತು ಸಮುದ್ರ ಗಸ್ತು ಮತ್ತು ಮಿಲಿಟರಿ ಕವಾಯತಿಗೆ ಚಾಲನೆ ನೀಡಲಾಗಿದೆ ಎಂದು ಚೀನಾ ಶನಿವಾರ ಘೋಷಿಸಿದೆ. ಶನಿವಾರ ಮಧ್ಯಾಹ್ನ ಚೀನಾದ 42 ಯುದ್ಧ ವಿಮಾನಗಳು ತೈವಾನ್ನ ವಾಯುರಕ್ಷಣಾ ವಲಯದ ಸುತ್ತ ಅತಿಕ್ರಮಣ ನಡೆಸುತ್ತಿರುವುದನ್ನು ಪತ್ತೆಹಚ್ಚಲಾಗಿದೆ. ಚೀನಾದ 8 ಯುದ್ಧನೌಕೆಗಳೂ ಕವಾಯತಿನಲ್ಲಿ ಪಾಲ್ಗೊಂಡಿವೆ ಎಂದು ತೈವಾನ್ ಸರಕಾರದ ಮೂಲಗಳು ಮಾಹಿತಿ ನೀಡಿವೆ.
ನಮ್ಮ ದೇಶದ ಪ್ರಜಾಸತ್ತಾತ್ಮಕ ಚುನಾವಣಾ ಪ್ರಕ್ರಿಯೆಯಲ್ಲಿ ಬಹಿರಂಗವಾಗಿ ಹಸ್ತಕ್ಷೇಪ ಮತ್ತು ಮಧ್ಯಪ್ರವೇಶಕ್ಕೆ ಬೆದರಿಸುವ ಹೇಳಿಕೆ ಹಾಗೂ ಸುಳ್ಳು ಸುದ್ಧಿಗಳನ್ನು ಬೀಜಿಂಗ್ ಬಳಸಿದೆ. ಚುನಾವಣೆಯಲ್ಲಿ ಮಧ್ಯಪ್ರವೇಶಿಸಲು ಚೀನಾದ ಸರ್ವಾಧಿಕಾರಿ ಸರಕಾರದ ಕ್ರೂರ ಪ್ರಯತ್ನಗಳನ್ನು ತೈವಾನ್ ವಿದೇಶಾಂಗ ಇಲಾಖೆ ಪ್ರಬಲ ಪದಗಳಲ್ಲಿ ಖಂಡಿಸುತ್ತದೆ ಎಂದು ಹೇಳಿಕೆ ಉಲ್ಲೇಖಿಸಿದೆ