ಸ್ವಾತಂತ್ರ್ಯಕ್ಕಾಗಿ ಅಮೆರಿಕದ ಅವಲಂಬನೆ ತೈವಾನ್ ಗೆ ತಿರುಗು ಬಾಣವಾಗಲಿದೆ : ಚೀನಾ ಎಚ್ಚರಿಕೆ
PC : PTI
ಬೀಜಿಂಗ್ : ಸ್ವಾತಂತ್ರ್ಯ ಪಡೆಯಲು ಅಮೆರಿಕದ ಬೆಂಬಲ ಯಾಚಿಸುವ ತೈವಾನ್ ನ ನಡೆ ಖಂಡಿತಾ ತಿರುಗು ಬಾಣವಾಗಿ ಪರಿಣಮಿಸಲಿದೆ ಎಂದು ಚೀನಾ ಶುಕ್ರವಾರ ಎಚ್ಚರಿಕೆ ನೀಡಿದೆ.
ಚೀನಾವನ್ನು ನಿಗ್ರಹಿಸಲು ತೈವಾನ್ ಅನ್ನು ಬಳಸಿಕೊಳ್ಳುವ ಅಮೆರಿಕದ ತಂತ್ರಗಾರಿಕೆಯೂ ವಿಫಲವಾಗಲಿದೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ತೈವಾನ್ ಅಧ್ಯಕ್ಷ ಲಾಯ್ ಚಿಂಗ್-ಟೆ ಅಮೆರಿಕ ಸಂಸತ್ನ ಸ್ಪೀಕರ್ ಜತೆ ಮಾತುಕತೆ ನಡೆಸಿರುವುದಕ್ಕೆ ನಮ್ಮ ಬಲವಾದ ಆಕ್ಷೇಪಗಳನ್ನು ಸಲ್ಲಿಸಿದ್ದು `ಒಂದು ಚೀನಾ' ತತ್ವಕ್ಕೆ ಬದ್ಧವಾಗಿರುವಂತೆ ಅಮೆರಿಕವನ್ನು ಆಗ್ರಹಿಸಲಾಗಿದೆ. ತೈವಾನ್ ಸಂಬಂಧಿಸಿದ ವ್ಯವಹಾರದಲ್ಲಿ ಮಧ್ಯಪ್ರವೇಶಿಸುವುದನ್ನು ಅಮೆರಿಕ ನಿಲ್ಲಿಸಬೇಕು. ಅವರು ಏನೇ ಹೇಳಲಿ, ತೈವಾನ್ ಚೀನಾದ ಭಾಗವಾಗಿದೆ ಎಂಬ ವಸ್ತುನಿಷ್ಠ ಸತ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ. ಚೀನಾ ಅನಿವಾರ್ಯವಾಗಿ ಮತ್ತೆ ಒಂದಾಗುವ ಐತಿಹಾಸಿಕ ಪ್ರವೃತ್ತಿಯನ್ನು ಅವರು ತಡೆಯಲಾರರು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಬೆಳೆಯುತ್ತಿರುವ ನಿರಂಕುಶಾಧಿಕಾರವನ್ನು ಎದುರಿಸಲು ಪ್ರಜಾಪ್ರಭುತ್ವಗಳು ಹೆಚ್ಚು ಒಗ್ಗಟ್ಟಿನಿಂದ ಇರಬೇಕು. ಪ್ರತ್ಯೇಕತಾವಾದಿ ಚಟುವಟಿಕೆಗಳು ತೈವಾನ್ ಜಲಸಂಧಿಯಲ್ಲಿ ಶಾಂತಿ ಮತ್ತು ಸ್ಥಿರತೆಗೆ ಅತೀ ದೊಡ್ಡ ಬೆದರಿಕೆಯಾಗಿದೆ ಎಂದು ಚೀನಾದ ವಿದೇಶಾಂಗ ಇಲಾಖೆ ಹೇಳಿದೆ.