ಆರ್ಥಿಕ ದಬ್ಬಾಳಿಕೆ, ಬಣ ಪೈಪೋಟಿಗೆ ಚೀನಾ ವಿರೋಧಿ: ಜಿಂಪಿಂಗ್ ಪ್ರತಿಪಾದನೆ
Photo : PTI
ಬೀಜಿಂಗ್: ತಮ್ಮ ದೇಶ ಆರ್ಥಿಕ ದಬ್ಬಾಳಿಕೆ ಮತ್ತು ಬಣಗಳ ಪೈಪೋಟಿಯನ್ನು ತಿರಸ್ಕರಿಸುತ್ತದೆ ಎಂದು ಚೀನಾ ಅಧ್ಯಕ್ಷ ಕ್ಸಿಜಿಂಪಿಂಗ್ ಪ್ರತಿಪಾದಿಸಿದ್ದಾರೆ.
ಬೀಜಿಂಗ್ ನಲ್ಲಿ ಆಯೋಜಿಸಿರುವ ‘ಬೆಲ್ಟ್ ಆ್ಯಂಡ್ ರೋಡ್’ (ಬಿಆರ್ಐ)ವೇದಿಕೆಯ ಶೃಂಗಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ‘ಚೀನಾವು ಸೈದ್ಧಾಂತಿಕ ಮುಖಾಮುಖಿ, ಭೌಗೋಳಿಕ ರಾಜಕೀಯ ಆಟಗಳು ಅಥವಾ ಬಣಗಳ ಮುಖಾಮುಖಿಯಲ್ಲಿ ತೊಡಗಿಸಿಕೊಳ್ಳುವುದಿಲ್ಲ’ ಎಂದು ಭರವಸೆ ನೀಡಿದರು.
ಶೃಂಗಸಭೆಯಲ್ಲಿ ರಶ್ಯ ಅಧ್ಯಕ್ಷ ಪುಟಿನ್ ಸಹಿತ ಬಿಆರ್ಐ ವೇದಿಕೆಯ 130 ಸದಸ್ಯ ದೇಶಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ. ‘ಏಕಪಕ್ಷೀಯ ನಿರ್ಬಂಧ, ಆರ್ಥಿಕ ದಬ್ಬಾಳಿಕೆ, ಜಾಗತಿಕ ವೇದಿಕೆಯಲ್ಲಿ ಒಬ್ಬರನ್ನು ಪ್ರತ್ಯೇಕಿಸುವುದು, ಸಂಬಂಧ ಕಡಿದುಕೊಳ್ಳುವುದು ಇತ್ಯಾದಿಗಳನ್ನು ನಾವು ವಿರೋಧಿಸುತ್ತೇವೆ. ಇತರರ ಅಭಿವೃದ್ಧಿಯನ್ನು ಬೆದರಿಕೆ ಎಂದು ಪರಿಗಣಿಸುವುದು, ಆರ್ಥಿಕ ಪರಸ್ಪರ ಅವಲಂಬನೆಯನ್ನು ಅಪಾಯ ಎಂದು ಪರಿಗಣಿಸುವುದು ಯಾರ ಬದುಕನ್ನೂ ಉತ್ತಮಗೊಳಿಸದು ಮತ್ತು ಸ್ವಂತ ಅಭಿವೃದ್ಧಿಗೆ ವೇಗ ನೀಡುವುದಿಲ್ಲ. ಇದರ ಬದಲು, ಬಿಆರ್ ಐ ಜಾಗತಿಕ ಆರ್ಥಿಕತೆಗೆ ಹೊಸ ಪ್ರಚೋದನೆಯನ್ನು ತುಂಬಲು ಪ್ರಯತ್ನಿಸುತ್ತದೆ ’ ಎಂದು ಜಿಂಪಿಂಗ್ ಹೇಳಿದ್ದಾರೆ.
‘ಕಾರ್ಯ ನೀತಿ, ಮೂಲಸೌಕರ್ಯ, ವ್ಯಾಪಾರ, ಹಣಕಾಸು ಮತ್ತು ಜನರಿಂದ ಜನರ ಸಂಪರ್ಕವನ್ನು ಹೆಚ್ಚಿಸುವ ಗುರಿಯನ್ನು ಆರ್ಬಿಐ ಹೊಂದಿದೆ. ಚೀನಾವು ಬಿಆರ್ ಐ ಪಾಲುದಾರರೊಂದಿಗೆ ಸಹಕಾರವನ್ನು ಗಾಢವಾಗಿಸಲು ಸಿದ್ಧವಾಗಿದೆ ಮತ್ತು ಪ್ರತಿಯೊಂದು ದೇಶದ ಆಧುನೀಕರಣವನ್ನು ಸಾಧ್ಯವಾಗಿಸಲು ಅವಿರತವಾಗಿ ಕಾರ್ಯ ನಿರ್ವಹಿಸುತ್ತದೆ’ ಎಂದು ಜಿಂಪಿಂಗ್ ಹೇಳಿದ್ದಾರೆ. ಸಭೆಯಲ್ಲಿ ಮಾತನಾಡಿದ ರಶ್ಯ ಅಧ್ಯಕ್ಷ ಪುಟಿನ್ ‘ಬಿಆರ್ ಐ ಉಪಕ್ರಮವು ಅನಿರೀಕ್ಷಿತ ಯಶೋಗಾಥೆಯಾಗಿದೆ. ಚೀನಾ ಒಂದು ದಶಕದ ಹಿಂದೆ ಚಾಲನೆ ನೀಡಿದ ಈ ಉಪಕ್ರಮದ ಜಾಗತಿಕ ಆಯಾಮಗಳನ್ನು ಗಮನಿಸಿದರೆ, ಇದು ಕಾರ್ಯರೂಪಕ್ಕೆ ಬರುವ ಬಗ್ಗೆ ಹಲವರಲ್ಲಿ ಅನುಮಾನ ಮೂಡಿರುವುದರಲ್ಲಿ ಸಂದೇಹವಿಲ್ಲ’ ಎಂದು ಶ್ಲಾಘಿಸಿದರು.