ಲೆಬನಾನ್-ಇಸ್ರೇಲ್ ನಡುವೆ ತೀವ್ರಗೊಂಡ ಪ್ರಕ್ಷುಬ್ಧತೆ | ಲೆಬನಾನ್, ಇಸ್ರೇಲ್ ತೊರೆಯುವಂತೆ ತನ್ನ ನಾಗರಿಕರಿಗೆ ಸೂಚಿಸಿದ ಚೀನಾ
ಸಾಂದರ್ಭಿಕ ಚಿತ್ರ | PC : aljazeera.com
ಬೀಜಿಂಗ್: ಮಧ್ಯಪ್ರಾಚ್ಯದಲ್ಲಿನ ಪರಿಸ್ಥಿತಿ ಉದ್ವಿಗ್ನ ಮತ್ತು ಚಂಚಲವಾಗಿರುವುದರಿಂದ, ಚೀನಾ ನಾಗರಿಕರು ಕೂಡಲೇ ಇಸ್ರೇಲ್ ಮತ್ತು ಲೆಬನಾನ್ ದೇಶಗಳನ್ನು ತೊರೆಯಬೇಕು ಎಂದು ಚೀನಾ ಸೂಚನೆ ನೀಡಿದೆ.
ಇಸ್ರೇಲ್ ಮತ್ತು ಲೆಬನಾನ್ ಸಶಸ್ತ್ರ ಪಡೆ ಹಿಝ್ಬುಲ್ಲಾ ನಡುವಿನ ಗಡಿ ಉದ್ವಿಗ್ನತೆಯು ತೀವ್ರ ಸ್ವರೂಪ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಪೂರ್ಣ ಪ್ರಮಾಣದ ಯುದ್ಧ ನಡೆಯಬಹುದು ಎಂಬ ಆತಂಕ ಈ ಪ್ರಾಂತ್ಯದಲ್ಲಿ ಮನೆ ಮಾಡಿದೆ. ಹೀಗಾಗಿ, ಟೆಲ್ ಅವೀವ್ ನಲ್ಲಿನ ಚೀನಾ ರಾಯಭಾರ ಕಚೇರಿಯು ಯುದ್ಧ ಸಾಧ್ಯತೆ ಕುರಿತು ತನ್ನ ನಾಗರಿಕರಿಗೆ ಎಚ್ಚರಿಕೆ ರವಾನಿಸಿದೆ.
“ಇಸ್ರೇಲ್ ನಲ್ಲಿ ಭದ್ರತಾ ಪರಿಸ್ಥಿತಿಯು ಸಂಕೀರ್ಣ ಮತ್ತು ಚಂಚಲವಾಗಿದೆ” ಎಂದು ಚೀನಾ ರಾಯಭಾರ ಕಚೇರಿ ಎಚ್ಚರಿಸಿದೆ.
ಇಸ್ರೇಲ್ ನಲ್ಲಿಯೇ ಉಳಿಯಲು ಬಯಸುವವರು ಸ್ಥಳೀಯ ಭದ್ರತಾ ಮಾರ್ಗಸೂಚಿಗಳನ್ನು ಪಾಲಿಸಬೇಕು ಹಾಗೂ ಅನವಶ್ಯಕ ಪ್ರವಾಸವನ್ನು ತಪ್ಪಿಸಬೇಕು ಎಂದು ಅದು ಎಚ್ಚರಿಕೆ ನೀಡಿದೆ.
ಕ್ಷಿಪಣಿಗಳು, ರಾಕೆಟ್ ಗಳು, ಡ್ರೋನ್ ಗಳು ಹಾಗೂ ಇನ್ನಿತರ ಸ್ವರೂಪದ ದಾಳಿಗಳು ನಡೆಯುವ ಸಾಧ್ಯತೆ ಇದೆ ಎಂದು ತನ್ನ ನಾಗರಿಕರಿಗೆ ಎಚ್ಚರಿಸಿರುವ ಚೀನಾ, ಲೆಬನಾನ್ ನೊಂದಿಗೆ ಗಡಿ ಹಂಚಿಕೊಂಡಿರುವ ಉತ್ತರ ಇಸ್ರೇಲ್ ನಿಂದ ದೂರ ಉಳಿಯಿರಿ ಎಂದೂ ಸಲಹೆ ನೀಡಿದೆ.
ಲೆಬನಾನ್ ನ ಬೈರೂತ್ ನಲ್ಲಿರುವ ಚೀನಾ ರಾಯಭಾರ ಕಚೇರಿ ಕೂಡಾ ತನ್ನ ನಾಗರಿಕರಿಗೆ ಇಂತಹುದೇ ಎಚ್ಚರಿಕೆ ನೀಡಿದೆ ಎಂದು ವರದಿಯಾಗಿದೆ. ಎಷ್ಟು ಸಾಧ್ಯವೊ ಅಷ್ಟು ಬೇಗ ಇಸ್ರೇಲ್ ತೊರೆಯಿರಿ ಹಾಗೂ ಇಸ್ರೇಲ್ ಬಳಿಯಿರುವ ದಕ್ಷಿಣ ಪ್ರಾಂತ್ಯಗಳಲ್ಲಿ ಪ್ರಯಾಣ ಮಾಡಬೇಡಿ ಎಂದೂ ಅದು ತನ್ನ ನಾಗರಿಕರಿಗೆ ಸಲಹೆ ನೀಡಿದೆ