ಸಿರಿಯಾದ ಮೂರು ಸೈನಿಕರ ಹತ್ಯೆಯ ಬಳಿಕ ಲೆಬನಾನ್-ಸಿರಿಯಾ ಗಡಿಯಲ್ಲಿ ಭುಗಿಲೆದ್ದ ಘರ್ಷಣೆ

Photo: NDTV
ಬೈರೂತ್: ಶನಿವಾರ ಸಿರಿಯಾದ ಮೂವರು ಯೋಧರು ಹತ್ಯೆಯಾದ ಬಳಿಕ ಲೆಬನಾನ್ ಮತ್ತು ಸಿರಿಯಾ ನಡುವಿನ ಗಡಿಯುದ್ದಕ್ಕೂ ರವಿವಾರ ರಾತ್ರಿಯಿಂದ ಹೋರಾಟ ತೀವ್ರಗೊಂಡಿರುವುದಾಗಿ ವರದಿಯಾಗಿದೆ.
ಸಿರಿಯಾದ ಹೋಮ್ಸ್ ಪ್ರಾಂತದ ಜೆಯ್ಟಾ ಅಣೆಕಟ್ಟಿನ ಬಳಿ ಹೊಂಚುದಾಳಿ ನಡೆಸಿದ ಹಿಜ್ಬುಲ್ಲಾ ಗುಂಪು ಈ ಹತ್ಯೆ ನಡೆಸಿರುವುದಾಗಿ ಸಿರಿಯಾ ದೂಷಿಸಿದ್ದು ಲೆಬನಾನ್ ನ ಗ್ರಾಮಗಳ ಮೇಲೆ ಫಿರಂಗಿ ದಾಳಿ ನಡೆಸಿದೆ.
ಉತ್ತರ ಮತ್ತು ಪೂರ್ವದಲ್ಲಿ ಸಿರಿಯಾದ ಜತೆಗಿನ ಮತ್ತು ದಕ್ಷಿಣದಲ್ಲಿ ಇಸ್ರೇಲ್ ಜತೆಗಿನ ಗಡಿಯುದ್ದಕ್ಕೂ ಲೆಬನಾನ್ ಸೈನ್ಯವನ್ನು ಕ್ರಮೇಣ ನಿಯೋಜಿಸುತ್ತಿರುವುದರಿಂದ ತನ್ನ ಮಿಲಿಟರಿಗೆ ಧನಸಹಾಯವನ್ನು ಹೆಚ್ಚಿಸಲು ಅಂತರಾಷ್ಟ್ರೀಯ ಬೆಂಬಲವನ್ನು ಬಯಸುತ್ತಿದೆ.
ಉದ್ವಿಗ್ನತೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಪರಸ್ಪರ ಸಂವಹನ ನಡೆಸುತ್ತಿರುವುದಾಗಿ ಲೆಬನಾನ್ ಮತ್ತು ಸಿರಿಯಾದ ಸೇನೆ ಹೇಳಿದೆ. ಈ ಪ್ರದೇಶದಲ್ಲಿ ಲೆಬನಾನ್ ನ ಪಡೆಯನ್ನು ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ. ರವಿವಾರ ರಾತ್ರಿಯಿಂದ ಫಿರಂಗಿ ಮತ್ತು ಗುಂಡಿನ ದಾಳಿ ಮುಂದುವರಿದಿರುವುದರಿಂದ ಗಡಿಪ್ರದೇಶದಲ್ಲಿರುವ ಕುಟುಂಬಗಳು ಸಿರಿಯಾದ ಹೆರ್ಮೆಲ್ ನಗರಕ್ಕೆ ಪಲಾಯನ ಮಾಡುತ್ತಿವೆ ಎಂದು ವರದಿಯಾಗಿದೆ.
ಲೆಬನಾನ್ ನ ಹಿಜ್ಬುಲ್ಲಾ ಸಶಸ್ತ್ರ ಹೋರಾಟಗಾರರು ಶನಿವಾರ ಈಶಾನ್ಯ ಲೆಬನಾನ್ ನ ಗಡಿದಾಟು ಮೂಲಕ ಸಿರಿಯಾ ಪ್ರವೇಶಿಸಿ, ಮೂವರು ಯೋಧರನ್ನು ಅಪಹರಿಸಿ ಲೆಬನಾನ್ ನಲ್ಲಿ ಅವರನ್ನು ಹತ್ಯೆ ಮಾಡಿದ್ದಾರೆ ಎಂದು ಸಿರಿಯಾದ ಮಧ್ಯಂತರ ಸರಕಾರ ಆರೋಪಿಸಿದೆ. ಈ ಘಟನೆಯಲ್ಲಿ ತನ್ನ ಪಾತ್ರವಿಲ್ಲ ಎಂದು ಹಿಜ್ಬುಲ್ಲಾ ಪ್ರತಿಕ್ರಿಯಿಸಿದ್ದು ಸಿರಿಯಾ ಯೋಧರ ಹತ್ಯೆ ನಡೆಸಿದ್ದು ಯಾರು ಎಂಬುದು ಸ್ಪಷ್ಟಗೊಂಡಿಲ್ಲ. ಸಿರಿಯಾ ಯೋಧರನ್ನು ಹತ್ಯೆಮಾಡಿದ ಹಿಜ್ಬುಲ್ಲಾ ಗುಂಪಿನ ವಿರುದ್ಧ ಸಿರಿಯಾ ಸೇನೆ ಫಿರಂಗಿ ದಾಳಿ ನಡೆಸಿದೆ ಎಂದು ಸಿರಿಯಾ ರಕ್ಷಣಾ ಇಲಾಖೆಯ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಎರಡೂ ಕಡೆಯವರು ಹೆಚ್ಚುವರಿ ಪಡೆಗಳನ್ನು ನಿಯೋಜಿಸಿರುವುದು ಗಡಿಭಾಗದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಹಿಜ್ಬುಲ್ಲಾ ಗುಂಪಿಗೆ ಇರಾನ್ ನಿಂದ ಶಸ್ತ್ರಾಸ್ತ್ರ ಕಳ್ಳಸಾಗಣೆಯಾಗುವ ಪ್ರಮುಖ ಮಾರ್ಗ ಅಲ್-ಖುಸಾಯರ್ ಪ್ರದೇಶದಲ್ಲಿ ಘರ್ಷಣೆ ಕೇಂದ್ರೀಕೃತಗೊಂಡಿದೆ ಎಂದು ಮೂಲಗಳು ಹೇಳಿವೆ.