ಮೆಕ್ಸಿಕೋದ ಅಧ್ಯಕ್ಷ ಹುದ್ದೆಗೆ ಏರಲಿರುವ ಪ್ರಥಮ ಮಹಿಳೆ ಕ್ಲಾಡಿಯಾ ಶೀನ್ಬೌಮ್
ಕ್ಲಾಡಿಯಾ ಶೀನ್ಬೌಮ್ (Photo:X/Dra. Claudia Sheinbaum)
ಮೆಕ್ಸಿಕೋ ಸಿಟಿ: ಮೆಕ್ಸಿಕೋದ 200 ವರ್ಷ ಇತಿಹಾಸದಲ್ಲಿಯೇ ಮೊದಲ ಬಾರಿಗೆ ದೇಶಕ್ಕೆ ಮಹಿಳಾ ಅಧ್ಯಕ್ಷೆಯೊಬ್ಬರು ಸಿಗಲಿದ್ದಾರೆ. ಕ್ಲಾಡಿಯಾ ಶೀನ್ಬೌಮ್ ಅವರು ದೇಶದ ಮೊದಲ ಅಧ್ಯಕ್ಷೆಯಾಗಿ ಅಧಿಕಾರಕ್ಕೇರುವ ಎಲ್ಲಾ ಸಾಧ್ಯತೆಗಳು ನಿಚ್ಚಳವಾಗಿವೆ.
ದೇಶದಲ್ಲಿ ನಡೆದ ಚುನಾವಣೆಯಲ್ಲಿ ಅವರಿಗೆ ಶೇ 58.3 ರಿಂದ ಶೇ60.7ರಷ್ಟು ಮತಗಳು ದೊರಕಿವೆ ಎಂದು ರಾಷ್ಟ್ರೀಯ ಎಲೆಕ್ಟೋರಲ್ ಇನ್ಸ್ಟಿಟ್ಯೂಟ್ ಅಧ್ಯಕ್ಷರು ಹೇಳಿದ್ದಾರೆ. ಅವರ ಎದುರಾಳಿಗಳಾದ ಕ್ಸೊಚಿಟ್ಲ್ ಗಲ್ವೆಝ್ ಅವರಿಗೆ ಶೇ 26.6ರಿಂದ ಶೇ 28.6 ಮತಗಳು ದೊರಕಿದ್ದರೆ ಇನ್ನೋರ್ವ ಎದುರಾಳಿ ಜಾರ್ಜ್ ಅಲ್ವಾರೆಜ್ ಅವರಿಗೆ ಶೇ 9.9ರಿಂದ ಶೇ10.8ರಷ್ಟ ಮತಗಳು ದೊರಕಿದೆ.
ಕ್ಲಾಡಿಯಾ ಅವರ ಮೊರೆನಾ ಪಕ್ಷವು ಕಾಂಗ್ರೆಸ್ನ ಎರಡೂ ಸದನಗಳಲ್ಲಿ ಬಹುಮತ ಪಡೆಯುವ ಸಾಧ್ಯತೆಯೂ ನಿಚ್ಚಳವಾಗಿದೆ.
ಹವಾಮಾನ ವಿಜ್ಞಾನಿ ಹಾಗೂ ಮೆಕ್ಸಿಕೋ ನಗರದ ಮಾಜಿ ಮೇಯರ್ ಕೂಡ ಆಗಿರುವ ಕ್ಲಾಡಿಯಾ ತಮ್ಮ ಇಬ್ಬರು ಎದುರಾಳಿಗಳು ಕರೆ ಮಾಡಿದ್ದಾರೆ ಹಾಗೂ ಆಕೆ ಗೆದ್ದಿದ್ದಾರೆಂದು ಹೇಳಿದ್ದಾರೆಂದು ತಿಳಿಸಿದರು.
ಕ್ಯಾಥೊಲಿಕ್ ಸಮುದಾಯದವರೇ ಅಧಿಕವಾಗಿರುವ ಮೆಕ್ಸಿಕೋದ ಅತ್ಯುನ್ನತ ಪದವಿಗೇರಲಿರುವ ಮೊದಲ ಯಹೂದಿ ಹಿನ್ನೆಲೆ ಹೊಂದಿರುವ ವ್ಯಕ್ತಿಯೂ ಕ್ಲಾಡಿಯಾ ಆಗಲಿದ್ದಾರೆ.