ಅಮೆರಿಕದಲ್ಲಿ ಶೀತ ಬಿರುಗಾಳಿ: 2000ಕ್ಕೂ ಹೆಚ್ಚು ವಿಮಾನ ರದ್ದು
Photo: PTI
ಚಿಕಾಗೋ: ಅಮೆರಿಕದ ಪಶ್ಚಿಮ ಮಧ್ಯಭಾಗ ಮತ್ತು ದಕ್ಷಿಣ ಭಾಗಕ್ಕೆ ಶೀತ ಬಿರುಗಾಳಿ ಅಪ್ಪಳಿಸಿದ ಹಿನ್ನೆಲೆಯಲ್ಲಿ ದೇಶದಲ್ಲಿ ವಿಮಾನಗಳ ಸಂಚಾರ ಅಸ್ತವ್ಯಸ್ತವಾಗಿದೆ. ಹಲವು ವಿಮಾನಗಳು ವಿಳಂಬವಾಗಿದ್ದು, ಮತ್ತೆ ಹಲವು ವಿಮಾನಗಳು ರದ್ದಾಗಿರುವುದರಿಂದ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಅತಂತ್ರರಾಗಿ ಉಳಿಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಫ್ಲೈಟ್ಅವೇರ್.ಕಾಮ್ ವೆಬ್ಸೈಟ್ ನಿಂದ ಲಭ್ಯವಾದ ಮಾಹಿತಿಯ ಪ್ರಕಾರ, 2400ಕ್ಕೂ ಹೆಚ್ಚು ವಿಮಾನಗಳ ಸಂಚಾರ ವಿಳಂಬವಾಗಿದ್ದು, 2000ಕ್ಕೂ ಹೆಚ್ಚು ವಿಮಾನಗಳು ಬಿರುಗಾಳಿ ಹೊಡೆತದಿಂದ ರದ್ದಾಗಿವೆ.
ಚಿಕಾಗೋದ ಓಹರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಟ್ಟು ವಿಮಾನ ಸಂಚಾರದ ಪೈಕಿ ಶೇಕಡ 40ರಷ್ಟು ವಿಮಾನಗಳು ಮತ್ತು ಅಮೆರಿಕಕ್ಕೆ ಆಗಮಿಸುವ ಶೇಕಡ 36ರಷ್ಟು ವಿಮಾನಗಳು ರದ್ದಾಗಿವೆ. ಮತ್ತು ಮಿಡ್ ವೇ ಇಂಟರ್ ನ್ಯಾಷನಲ್ ವಿಮಾನ ನಿಲ್ದಾಣದಲ್ಲಿ ಶೇಕಡ 60ರಷ್ಟು ವಿಮಾನಗಳು ರದ್ದಾಗಿವೆ.
ಡೆನ್ವೆರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಮಿಲ್ವುಕೀ ಮಿಚೆಲ್ ಇಂಟರ್ ನ್ಯಾಷನಲ್ ವಿಮಾನ ನಿಲ್ದಾಣಗಳಲ್ಲೂ ಸಂಚಾರ ವ್ಯತ್ಯಯವಾಗಿದೆ. 737 ಮ್ಯಾಕ್ಸ್ 9 ವಿಮಾನಗಳ ಹಾರಾಟವನ್ನು ರದ್ದುಪಡಿಸಿರುವುದು ಕೂಡಾ ಪರಿಣಾಮದ ತೀವ್ರತೆ ಹೆಚ್ಚಿಸಿದೆ. 200ಕ್ಕೂ ಅಧಿಕ ಯುನೈಟೆಡ್ ಮತ್ತು ಅಲಕ್ಸಾ ಏರ್ ಲೈನ್ ವಿಮಾನಗಳನ್ನು ಈ ವಾರ ರದ್ದುಪಡಿಸುವಂತೆ ದೇಶದ ವಿಮಾನಯಾನ ನಿಯಂತ್ರಣ ಸಂಸ್ಥೆ ಸೂಚಿಸಿದೆ.