ನಿಜವಾದ ಯುದ್ಧ ನೋಡಲು ಬನ್ನಿ: ಟ್ರಂಪ್ಗೆ ಝೆಲೆನ್ಸ್ಕಿ ಆಹ್ವಾನ
Image Credit source: PTI
ಕೀವ್: ರಶ್ಯವು ಉಕ್ರೇನ್ ಮೇಲೆ ನಡೆಸಿದ ಪೂರ್ಣಪ್ರಮಾಣದ ಆಕ್ರಮಣದ ಮುಂಚೂಣಿ ಕ್ಷೇತ್ರಕ್ಕೆ ತನ್ನೊಂದಿಗೆ ಬಂದು ನಿಜವಾದ ಯುದ್ಧ ಹೇಗಿರುತ್ತೆ ಎಂದು ವೀಕ್ಷಿಸುವಂತೆ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರನ್ನು ಆಹ್ವಾನಿಸಿದ್ದಾರೆ.
ಜರ್ಮನಿಯ ಮ್ಯೂನಿಚ್ನಲ್ಲಿ ನಡೆದ ಭದ್ರತಾ ಸಮಾವೇಶದಲ್ಲಿ ಮಾತನಾಡಿದ ಅವರು ಅಮೆರಿಕದ ಅಧಿಕಾರಿಗಳೊಂದಿಗೆ ಸ್ನೇಹ ಸಂಬಂಧವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ ಮತ್ತು ಉಕ್ರೇನ್ ಯಾವಾಗಲೂ ಅವರಿಗೆ ಯುದ್ಧದ ನೈಜ ಮಾಹಿತಿ ದೊರಕಬೇಕೆಂದು ಬಯಸುತ್ತದೆ ಎಂದರು. `ಟ್ರಂಪ್ ಅವರು ಬಂದರೆ ಅವರೊಂದಿಗೆ ಯುದ್ಧದ ಮುಂಚೂಣಿಗೆ ಹೋಗಲು ನಾನು ಸಿದ್ಧ. ನಿರ್ಧಾರ ತೆಗೆದುಕೊಳ್ಳುವ ಜನರಿಗೆ ನಾವು ಅದರ ಅರ್ಥವನ್ನು ಪ್ರದರ್ಶಿಸಬೇಕು. ನಿಜವಾದ ಯುದ್ಧವನ್ನು ತೋರಿಸಬೇಕು, ಇನ್ಸ್ಟಾಗ್ರಾಮ್ನಲ್ಲಿ ಅಲ್ಲ' ಎಂದು ಉಕ್ರೇನ್ ಅಧ್ಯಕ್ಷರು ಹೇಳಿದ್ದಾರೆ.
ಅಮೆರಿಕದ ಅಧ್ಯಕ್ಷತೆಗೆ ಮರು ಸ್ಪರ್ಧಿಸಲು ಉತ್ಸುಕರಾಗಿರುವ ಟ್ರಂಪ್, ಇತ್ತೀಚೆಗೆ ನಡೆದ ಪ್ರಚಾರ ಸಭೆಯಲ್ಲಿ ಅಟ್ಲಾಂಟಿಕ್ ಸಾಗರದಾದ್ಯಂತ ಅಮೆರಿಕದ ಬದ್ಧತೆಯನ್ನು ಪ್ರಶ್ನಿಸಿದ್ದರು. ನವೆಂಬರ್ ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಆಯ್ಕೆಗೊಂಡರೆ ಕೆಲವು ನೇಟೊ ಸದಸ್ಯ ರಾಷ್ಟ್ರಗಳಿಗೆ ಅಮೆರಿಕ ನೀಡುತ್ತಿರುವ ನೆರವನ್ನು ಸ್ಥಗಿತಗೊಳಿಸುವ ಬಗ್ಗೆ ಚಿಂತನೆ ನಡೆಸಿರುವುದಾಗಿ ಟ್ರಂಪ್ ಘೋಷಿಸಿದ್ದರು.