ಗಾಝಾ ಯುದ್ಧಾಪರಾಧ ತನಿಖೆ ತೀವ್ರಗೊಳಿಸಲು ಬದ್ಧ: ಐಸಿಸಿ ಅಧಿಕಾರಿ ಹೇಳಿಕೆ
ಸಾಂದರ್ಭಿಕ ಚಿತ್ರ | Photo: NDTV
ಹೇಗ್: ಇಸ್ರೇಲ್-ಹಮಾಸ್ ನಡುವಿನ ಭೀಕರ ಸಂಘರ್ಷಕ್ಕೆ ಸಾಕ್ಷಿಯಾಗಿರುವ ಗಾಝಾದಲ್ಲಿ ಆಪಾದಿತ ಯುದ್ಧಾಪರಾಧಗಳ ತನಿಖೆಯ ಪ್ರಯತ್ನಗಳನ್ನು ವಿಸ್ತರಿಸಲು ಮತ್ತು ತೀವ್ರಗೊಳಿಸಲು ಬದ್ಧ ಎಂದು ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್(ಐಸಿಸಿ)ಯ ಮುಖ್ಯ ಪ್ರಾಸಿಕ್ಯೂಟರ್ ಕರೀಮ್ ಖಾನ್ ಹೇಳಿದ್ದಾರೆ.
ಇಸ್ರೇಲ್ ಮತ್ತು ಫೆಲೆಸ್ತೀನ್ ಪ್ರಾಂತಗಳಿಗೆ ಭೇಟಿ ನೀಡಿದ ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಅವರು ತನ್ನ ಭೇಟಿಯು ತನಿಖಾ ಸ್ವರೂಪದ್ದಾಗಿರಲಿಲ್ಲ. ಆದರೆ ಸಂಘರ್ಷದ ಎರಡೂ ಕಡೆಯ ಸಂತ್ರಸ್ತರ ಜತೆ ಮಾತನಾಡಲು ಸಾಧ್ಯವಾಗಿದೆ ಎಂದರು. 8 ವಾರಕ್ಕೂ ಹೆಚ್ಚು ಸಮಯದಿಂದ ಮುಂದುವರಿದಿರುವ ಸಂಘರ್ಷ ಹಾಗೂ ನಿರಂತರ ಬಾಂಬ್ದಾಳಿಯಿಂದಾಗಿ ಗಾಝಾದಲ್ಲಿ 15,200ಕ್ಕೂ ಅಧಿಕ ಮಂದಿ ಹತರಾಗಿರುವುದಾಗಿ ಹಮಾಸ್ ಹೇಳಿದೆ.
ಗಾಝಾದಲ್ಲಿನ ಪರಿಸ್ಥಿತಿಯ ಕುರಿತ ತನಿಖೆಯನ್ನು ಮುಂದುವರಿಸುವ ಪ್ರಯತ್ನಗಳನ್ನು ಐಸಿಸಿ ಇನ್ನಷ್ಟು ತೀವ್ರಗೊಳಿಸಲಿದೆ. ಪ್ರಸ್ತುತ ಸಂಘರ್ಷದ ಸಮಯದಲ್ಲಿ ಅಪರಾಧಗಳ ಕುರಿತ ವಿಶ್ವಾಸಾರ್ಹ ಆರೋಪಗಳು ಸಕಾಲಿಕ, ಸ್ವತಂತ್ರ ಪರಿಶೀಲನೆ ಮತ್ತು ತನಿಖೆಯ ವಿಷಯವಾಗಿರಬೇಕು ಎಂದು ಕರೀಮ್ ಖಾನ್ ಹೇಳಿದ್ದಾರೆ.
ಹಮಾಸ್ ದಾಳಿಗೆ ಇಸ್ರೇಲ್ ಹೇಗೆ ಪ್ರತಿಕ್ರಿಯಿಸಿತು ಎಂಬುದು ಸಶಸ್ತ್ರ ಸಂಘರ್ಷವನ್ನು ನಿಯಂತ್ರಿಸುವ ಸ್ಪಷ್ಟ ಕಾನೂನು ನಿಯತಾಂಕಗಳಿಗೆ ಒಳಪಟ್ಟಿರುತ್ತದೆ. ಗಾಝಾದಂತಹ ಜನನಿಬಿಡ ಪ್ರದೇಶಗಳಲ್ಲಿ ಸಂಘರ್ಷವು `ಅಂತರ್ಗತವಾಗಿ ಸಂಕೀರ್ಣವಾಗಿದೆ'. ಆದರೆ ಅಂತರಾಷ್ಟ್ರೀಯ ಮಾನವೀಯ ಕಾನೂನು ಇಲ್ಲಿಯೂ ಅನ್ವಯಿಸುತ್ತದೆ. ಎಲ್ಲಾ ಪಾರ್ಟಿಗಳೂ ಅಂತರಾಷ್ಟ್ರೀಯ ಮಾನವೀಯ ಕಾನೂನನ್ನು ಗೌರವಿಸಬೇಕು. ಆದರೆ ಇದು ಪಾಲನೆಯಾಗದಿದ್ದರೆ ಐಸಿಸಿಯನ್ನು ದೂರಿ ಪ್ರಯೋಜನವಿಲ್ಲ. ಗಾಝಾಕ್ಕೆ ಮಾನವೀಯ ನೆರವು ವಿತರಣೆ ಮುಂದುವರಿಯಬೇಕು ಮತ್ತು ಈ ನೆರವನ್ನು ಹಮಾಸ್ ಜಫ್ತಿ ಮಾಡಬಾರದು' ಎಂದವರು ಆಗ್ರಹಿಸಿದ್ದಾರೆ.
`ಈ ತನಿಖೆಯು ಈಗ 2023ರ ಅಕ್ಟೋಬರ್ 7ರಂದು ನಡೆದ ದಾಳಿಯ ನಂತರ ಉಲ್ಬಣಗೊಂಡ ಹಗೆತನ ಮತ್ತು ಹಿಂಸಾಚಾರದ ವಿಷಯಕ್ಕೂ ವಿಸ್ತರಿಸಿದೆ' ಎಂದು ಖಾನ್ ಈ ಹಿಂದೆಯೇ ಹೇಳಿದ್ದರು. ಆದರೆ ಇಸ್ರೇಲ್ ಐಸಿಸಿಯ ಸದಸ್ಯನಲ್ಲದ ಕಾರಣ ಐಸಿಸಿ ತಂಡವು ಗಾಝಾ ಅಥವಾ ಇಸ್ರೇಲ್ಗೆ ಪ್ರವೇಶಿಸಿ ತನಿಖೆ ನಡೆಸಲು ಸಾಧ್ಯವಾಗಿಲ್ಲ.
ಜಾಗತಿಕ ಸ್ವತಂತ್ರ ನ್ಯಾಯಾಲಯ
2002ರಲ್ಲಿ ಆರಂಭಗೊಂಡ ಐಸಿಸಿಯು ನರಮೇಧ, ಯುದ್ಧಾಪರಾಧಗಳು ಮತ್ತು ಮಾನವೀಯತೆಯ ವಿರುದ್ಧದ ಅಪರಾಧಗಳನ್ನು ಒಳಗೊಂಡಂತೆ ಗಂಭೀರ ಅಪರಾಧಗಳನ್ನು ತನಿಖೆ ನಡೆಸಲು ಸ್ಥಾಪಿಸಲಾದ ವಿಶ್ವದ ಏಕೈಕ ಸ್ವತಂತ್ರ ನ್ಯಾಯಾಲಯವಾಗಿದೆ. ಫೆಲೆಸ್ತೀನಿಯನ್ ಪ್ರಾಂತಗಳಲ್ಲಿ ಇಸ್ರೇಲ್, ಹಮಾಸ್ ಹಾಗೂ ಇತರ ಸಶಸ್ತ್ರ ಫೆಲೆಸ್ತೀನಿಯನ್ ಗುಂಪುಗಳು ನಡೆಸಿದ ಸಂಭವನೀಯ ಯುದ್ಧಾಪರಾಧಗಳ ಕುರಿತ ತನಿಖೆಯನ್ನು ಐಸಿಸಿ 2021ರಲ್ಲಿ ಆರಂಭಿಸಿದೆ.