ಕಾಂಗೋ: ಭಯೋತ್ಪಾದಕ ದಾಳಿಯಲ್ಲಿ ಕನಿಷ್ಠ 23 ಮಂದಿ ಮೃತ್ಯು

ಸಾಂದರ್ಭಿಕ ಚಿತ್ರ
ಬುನಿಯಾ: ಕಾಂಗೋ ಗಣರಾಜ್ಯದ ಈಶಾನ್ಯ ಪ್ರಾಂತದಲ್ಲಿ ಈ ವಾರ ಭಯೋತ್ಪಾದಕ ಗುಂಪು ನಡೆಸಿದ ದಾಳಿಯಲ್ಲಿ ಕನಿಷ್ಠ 23 ಮಂದಿ ಸಾವನ್ನಪ್ಪಿದ್ದು ಸುಮಾರು 20 ಮಂದಿಯನ್ನು ಅಪಹರಿಸಲಾಗಿದೆ ಎಂದು ಸ್ಥಳೀಯ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಉಗಾಂಡಾದ ಗಡಿಗೆ ಹೊಂದಿಕೊಂಡಿರುವ ಇಟೂರಿ ಪ್ರಾಂತದ ಮಟೋಲೊ ಮತ್ತು ಸಂಬೊಕೊ ಗ್ರಾಮಗಳಲ್ಲಿ ಅಲಾಯ್ಡ್ ಡೆಮಾಕ್ರಟಿಕ್ ಫೋರ್ಸಸ್ (ಎಡಿಎಫ್) ಗುಂಪು ದಾಳಿ ನಡೆಸಿ ಕನಿಷ್ಟ 23 ಮಂದಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದೆ. ಮಟೋಲೊ ಗ್ರಾಮದ ಮುಖ್ಯಸ್ಥನ ಪುತ್ರನ ಸಹಿತ 20 ಮಂದಿಯನ್ನು ಒತ್ತೆಸೆರೆಯಲ್ಲಿ ಇರಿಸಿಕೊಂಡಿದ್ದಾರೆ. ಮೃತಪಟ್ಟವರು ಮತ್ತು ಅಪಹರಣಕ್ಕೊಳಗಾದವರಲ್ಲಿ ಹೆಚ್ಚಿನವರು ರೈತರು ಎಂದು ಎಂಬಾಸಾ ಪ್ರಾಂತದ ನಾಗರಿಕ ಸಂಘಟನೆಯ ಸಂಯೋಜಕ ಜೋಸ್ಪಿನ್ ಪಲುಕು ಹೇಳಿದ್ದಾರೆ.
ಈ ಮಧ್ಯೆ, ಪಶ್ಚಿಮ ಕಾಂಗೋ ಗಣರಾಜ್ಯದಲ್ಲಿ ಉಲ್ಬಣಿಸಿರುವ ನಿಗೂಢ ರೋಗಕ್ಕೆ ವಿಷಪ್ರಾಷನ ಕಾರಣವಾಗಿರುವ ಸಾಧ್ಯತೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ರವಿವಾರ ಹೇಳಿದೆ. ಜ್ವರ, ತಲೆನೋವು, ಕೀಲು ನೋವು, ಮೈಕೈ ನೋವು ಸೇರಿದಂತೆ ರೋಗಲಕ್ಷಣ ಇರುವ ಕಾಯಿಲೆ ಪಶ್ಚಿಮದ ಎಕ್ವಟೂರ್ ಪ್ರಾಂತದಲ್ಲಿ ಆತಂಕ ಮೂಡಿಸಿದ್ದು ಈ ವರ್ಷದ ಜನವರಿಯಿಂದ ಫೆಬ್ರವರಿ ಅಂತ್ಯದವರೆಗಿನ ಅವಧಿಯಲ್ಲಿ ಸುಮಾರು 1,100 ಪ್ರಕರಣ ಹಾಗೂ 60 ಸಾವು ವರದಿಯಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.