ಕಾಂಗೋ | ಕುಸಿದ ಪರ್ವತದಡಿ ಬೃಹತ್ ಪ್ರಮಾಣದ ತಾಮ್ರ ಪತ್ತೆ
ಸಾಂದರ್ಭಿಕ ಚಿತ್ರ | PTI
ಕಿನ್ಶಾಸ : ಮಧ್ಯ ಆಫ್ರಿಕಾದ ಕಾಂಗೋ ಗಣರಾಜ್ಯದಲ್ಲಿ ಪರ್ವತದ ಒಂದು ಭಾಗ ಕುಸಿದು ಬಿದ್ದಿದ್ದು ಅದರಡಿ ಸಾವಿರಾರು ಟನ್ಗಳಷ್ಟು ತಾಮ್ರ ಪತ್ತೆಯಾಗಿರುವುದಾಗಿ ವರದಿಯಾಗಿದೆ.
ಕಟಾಂಗಾ ಪ್ರಾಂತದಲ್ಲಿ ಪರ್ವತವೊಂದು ಕುಸಿಯುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಪರ್ವತದ ಒಂದು ಭಾಗ ಕುಸಿಯುತ್ತಿದ್ದಂತೆಯೇ ಜನರು ಗಾಭರಿಯಿಂದ ಓಡುತ್ತಿರುವ ವೀಡಿಯೊವನ್ನು `ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಬಳಕೆದಾರರು, ಈ ನಿಕ್ಷೇಪದ ವಿಷಯದಲ್ಲಿ ಪಾಶ್ಚಿಮಾತ್ಯ ದೇಶಗಳು ಮಧ್ಯ ಪ್ರವೇಶಿಸಬಾರದು ಎಂದು ಆಗ್ರಹಿಸಿದ್ದಾರೆ. ಈ ತಾಮ್ರದ ನಿಕ್ಷೇಪ ಕಾಂಗೋ ಜನತೆಗೆ ಸೇರಿದ ಪ್ರಾಕೃತಿಕ ಸಂಪನ್ಮೂಲವಾಗಿದೆ. ದೇಶದ 100%ದಷ್ಟು ಗಣಿಗಳನ್ನು ರಾಷ್ಟ್ರೀಕರಣಗೊಳಿಸಬೇಕು ಮತ್ತು ಎಲ್ಲಾ ಲಾಭಗಳನ್ನೂ ಜನತೆಯ ಪ್ರಯೋಜನಕ್ಕಾಗಿ ಬಳಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.
ಕಾಂಗೋ ಗಣರಾಜ್ಯದ ಕಟಾಂಗ ಪ್ರದೇಶವು ಹೇರಳ ಖನಿಜ ಸಂಪನ್ಮೂಲಗಳಿಗೆ ಹೆಸರಾಗಿದೆ. ಈ ವಲಯವು ಒಂದು ಶತಮಾನಕ್ಕಿಂತಲೂ ಹೆಚ್ಚು ಕಾಲ ತಾಮ್ರದ ಗಣಿಗಾರಿಕೆಗೆ ಹೆಸರಾಗಿದ್ದು 1950ರ ದಶಕದಲ್ಲಿ ಇದು ವಿಶ್ವದ ಅತೀ ದೊಡ್ಡ ತಾಮ್ರ ಉತ್ಪಾದನಾ ಪ್ರದೇಶವಾಗಿತ್ತು.