ಕಾಂಗೋ: ರುವಾಂಡಾ ಬೆಂಬಲಿತ ಬಂಡುಕೋರ ಪಡೆ ಮುನ್ನಡೆ
ಮತ್ತೊಂದು ಪ್ರಾಂತೀಯ ರಾಜಧಾನಿಗೆ ಮುತ್ತಿಗೆ

PC : aljazeera.com
ಕಿನ್ಷಾಸ: ಕಾಂಗೋ ಗಣರಾಜ್ಯದಲ್ಲಿ ಸರಕಾರದ ವಿರುದ್ಧ ಯುದ್ಧಸಾರಿರುವ ರುವಾಂಡಾ ಬೆಂಬಲಿತ ಬಂಡುಕೋರ ಗುಂಪು ಎಂ23 ರಾಜಧಾನಿ ಕಿನ್ಷಾಸದ ಮೇಲೆ ನಿಯಂತ್ರಣ ಸಾಧಿಸಿದ ಬಳಿಕ ದಕ್ಷಿಣದಲ್ಲಿ ನಿರಂತರ ಮುನ್ನಡೆ ಸಾಧಿಸುತ್ತಿದ್ದು ಶುಕ್ರವಾರ ಪ್ರಮುಖ ಮಿಲಿಟರಿ ವಿಮಾನ ನಿಲ್ದಾಣವನ್ನು ಸಮೀಪಿಸಿದೆ ಎಂದು ವರದಿಯಾಗಿದೆ.
ಡಿಆರ್ ಕಾಂಗೋ(ಕಾಂಗೋ ಗಣರಾಜ್ಯದಲ್ಲಿ) ದಶಕದಿಂದ ಮುಂದುವರಿದಿದ್ದ ಅಂತರ್ಯುದ್ಧ ಈ ವಾರದ ಆರಂಭದಲ್ಲಿ ಉಲ್ಬಣಿಸಿದ್ದು ಉತ್ತರ ಕಿವು ಪ್ರಾಂತದ ರಾಜಧಾನಿ ಗೋಮ ನಗರದ ಬಹುತೇಕ ಪ್ರದೇಶವನ್ನು ಬಂಡುಕೋರ ಪಡೆ ವಶಪಡಿಸಿಕೊಂಡಿದೆ.
1994ರ ನರಮೇಧಕ್ಕೆ ಸಂಬಂಧಿಸಿದ ಹೋರಾಟಗಾರರನ್ನು ನಿರ್ಮೂಲನೆ ಮಾಡುವುದು ತನ್ನ ಪ್ರಾಥಮಿಕ ಉದ್ದೇಶವೆಂದು ರುವಾಂಡಾ ಹೇಳುತ್ತಿದೆ. ಆದರೆ ಕಾಂಗೋದಲ್ಲಿ ಹೇರಳವಾಗಿರುವ ಇಲೆಕ್ಟ್ರಾನಿಕ್ಸ್ ನಲ್ಲಿ ಬಳಸುವ ಖನಿಜಗಳ ನಿಕ್ಷೇಪಗಳ ಲಾಭ ಪಡೆಯುವುದು ರುವಾಂಡಾದ ಯೋಜನೆಯಾಗಿದೆ ಎಂದು ವ್ಯಾಪಕ ಟೀಕೆ, ಖಂಡನೆ ವ್ಯಕ್ತವಾಗಿದೆ. ಕಾಂಗೋದ ಬಿಕ್ಕಟ್ಟಿನ ಬಗ್ಗೆ ಆಫ್ರಿಕಾ ಖಂಡದ ಮುಖಂಡರು ಮತ್ತು ಅಂತರಾಷ್ಟ್ರೀಯ ವೀಕ್ಷಕರು ಕಳವಳ ವ್ಯಕ್ತಪಡಿಸಿದ್ದು ದಕ್ಷಿಣ ಆಫ್ರಿಕಾದ ಪ್ರಾದೇಶಿಕ ಒಕ್ಕೂಟವು ಜಿಂಬಾಬ್ವೆ ರಾಜಧಾನಿ ಹರಾರೆಯಲ್ಲಿ ತುರ್ತು ಸಭೆ ನಡೆಸಿದೆ.
ಗುರುವಾರ ಹೋರಾಟವು ಕವುಮು ನಗರದಿಂದ ಸುಮಾರು 30 ಕಿ.ಮೀ ದೂರದಲ್ಲಿ ಕೇಂದ್ರೀಕೃತಗೊಂಡಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಕವುಮು ನಗರದಲ್ಲಿ ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ಮಹತ್ವದ ಮಿಲಿಟರಿ ವಾಯುನೆಲೆಯಿದ್ದು ಇದನ್ನು ರಕ್ಷಿಸಿಕೊಳ್ಳಲು ಕಾಂಗೋ ಸರಕಾರ ಹೆಚ್ಚುವರಿ ಪಡೆಯನ್ನು ರವಾನಿಸಿರುವುದಾಗಿ ವರದಿಯಾಗಿದೆ. ಬುಕಾವು ನಗರದತ್ತ ಎಂ23 ಪಡೆ ಕ್ಷಿಪ್ರವಾಗಿ ಮುನ್ನಡೆಯುತ್ತಿದೆ ಎಂಬ ವಿಶ್ವಾಸಾರ್ಹ ವರದಿಯಿಂದ ಕಳವಳಗೊಂಡಿರುವುದಾಗಿ ವಿಶ್ವಸಂಸ್ಥೆ ಶುಕ್ರವಾರ ಹೇಳಿದೆ. ಗೋಮದ ಬಳಿಕ ಕಾಂಗೋದ ಎರಡನೇ ಅತೀ ದೊಡ್ಡ ನಗರವಾದ ಬುಕಾವು ಸುಮಾರು 2 ದಶಲಕ್ಷ ಜನಸಂಖ್ಯೆಯನ್ನು ಹೊಂದಿದೆ. ಕಾಂಗೋ ಸೇನೆ ಬಂಡುಕೋರ ಪಡೆಗೆ ಹುರುಪಿನಿಂದ ತಿರುಗೇಟು ನೀಡುತ್ತಿದೆ ಎಂದು ಅಧ್ಯಕ್ಷ ಫೆಲಿಕ್ಸ್ ತಿಸೆಕೆಡಿ ಈ ವಾರದ ಆರಂಭದಲ್ಲಿ ಹೇಳಿಕೆ ನೀಡಿದ್ದರು. ಆದರೆ ಶಸ್ತ್ರಾಸ್ತ್ರಗಳ ಕೊರತೆಯಿರುವ ಮತ್ತು ಸುಸಜ್ಜಿತ ಶಸ್ತ್ರಾಸ್ತ್ರಗಳಿಲ್ಲದ, ಕಡಿಮೆ ವೇತನ ಪಡೆಯುತ್ತಿರುವ ಕಾಂಗೋ ಸೇನೆಯಿಂದ ಬಂಡುಕೋರ ಪಡೆಗೆ ಸೀಮಿತ ಪ್ರತಿರೋಧ ಎದುರಾಗಿದೆ ಎಂದು ಸ್ಥಳೀಯರನ್ನು ಉಲ್ಲೇಖಿಸಿದ ವರದಿ ಹೇಳಿದೆ.
ಕಾಂಗೋದಿಂದ ತನ್ನ ಪಡೆಗಳನ್ನು ತಕ್ಷಣ ಹಿಂದಕ್ಕೆ ಕರೆಸಿಕೊಳ್ಳುವಂತೆ ರುವಾಂಡಾವನ್ನು ವಿಶ್ವಸಂಸ್ಥೆ, ಅಮೆರಿಕ, ಯುರೋಪಿಯನ್ ಯೂನಿಯನ್, ಚೀನಾ, ಬ್ರಿಟನ್, ಫ್ರಾನ್ಸ್ ಮತ್ತು ಅಂಗೋಲಾ ಆಗ್ರಹಿಸಿವೆ. ಕಾಂಗೋದಿಂದ ಪಡೆಯನ್ನು ಹಿಂದಕ್ಕೆ ಕರೆಸಿಕೊಳ್ಳದಿದ್ದರೆ ರುವಾಂಡಾಕ್ಕೆ ನೀಡುತ್ತಿರುವ ನೆರವಿನ ಬಗ್ಗೆ ಮರುಪರಿಶೀಲನೆ ನಡೆಸುವುದಾಗಿ ಬ್ರಿಟನ್ ಎಚ್ಚರಿಕೆ ನೀಡಿದೆ.
ಕಾಂಗೋದಲ್ಲಿ ಈಗ ಇರುವ ಪರಿಸ್ಥಿತಿಗೆ ಅಂತರಾಷ್ಟ್ರೀಯ ಸಮುದಾಯವನ್ನೂ ದೂಷಿಸಬೇಕು ಎಂದು ಕಾಂಗೋ ಸರಕಾರದ ವಕ್ತಾರೆ ಯೊಲಾಂದೆ ಮಕೊಲೊ ಹೇಳಿದ್ದಾರೆ. ಬಂಡುಕೋರ ಪಡೆಯನ್ನು ರುವಾಂಡಾ ಬೆಂಬಲಿಸುತ್ತಿಲ್ಲ. ಎಂ23ಯಲ್ಲಿ ಇರುವುದು ರುವಾಂಡಾ ನಾಗರಿಕರಲ್ಲ, ಅವರು ಕಾಂಗೋಲಿಯನ್ನರು ಎಂದು ರುವಾಂಡಾ ಅಧ್ಯಕ್ಷ ಪೌಲ್ ಕಗಾಮೆ ಪ್ರತಿಕ್ರಿಯಿಸಿದ್ದಾರೆ.
ಈ ಮಧ್ಯೆ, ಕಾಂಗೋದ ಪೂರ್ವ ಪ್ರಾಂತದಲ್ಲಿ ನಡೆದ ಹೋರಾಟದಲ್ಲಿ ದಕ್ಷಿಣ ಆಫ್ರಿಕಾದ 13 ಯೋಧರು ಮೃತಪಟ್ಟ ಬಳಿಕ ರುವಾಂಡಾ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಉದ್ವಿಗ್ನತೆ ಹೆಚ್ಚಿದೆ. ದಕ್ಷಿಣ ಆಫ್ರಿಕಾ ಪಡೆಗಳು ಸೇರಿದಂತೆ ಆಫ್ರಿಕಾದ ಪ್ರಾದೇಶಿಕ ಒಕ್ಕೂಟದ ಪಡೆ ದಾಳಿ ನಡೆಸಿದರೆ ನಮ್ನನ್ನು ರಕ್ಷಿಸಿಕೊಳ್ಳಲು ನಾವು ಸಮರ್ಥರಾಗಿದ್ದೇವೆ ಎಂದು ರುವಾಂಡಾದ ವಿದೇಶಾಂಗ ಸಚಿವ ಒಲಿವಿಯರ್ ಎನ್ಡುಹಂಗಿರೆಹೆ ಹೇಳಿದ್ದಾರೆ.
*ವಿಶ್ವಸಂಸ್ಥೆ ಎಚ್ಚರಿಕೆ
ಡಿಆರ್ ಕಾಂಗೋ ಸೇರಿದಂತೆ ಈ ವಲಯದಲ್ಲಿ ಭೀಕರವಾದ ಮಾನವೀಯ ಬಿಕ್ಕಟ್ಟನ್ನು ಇದೀಗ ನಡೆಯುತ್ತಿರುವ ಸಂಘರ್ಷ ಮತ್ತಷ್ಟು ಹದಗೆಡಿಸಿದೆ. ಆಹಾರ ಮತ್ತು ನೀರಿನ ಕೊರತೆ ತೀವ್ರಗೊಂಡಿದ್ದು ಸುಮಾರು 5 ದಶಲಕ್ಷ ಜನರು ತಮ್ಮ ಮನೆಯಿಂದ ಸ್ಥಳಾಂತರಗೊಂಡಿದ್ದಾರೆ ಎಂದು ವಿಶ್ವಸಂಸ್ಥೆ ಎಚ್ಚರಿಕೆ ನೀಡಿದೆ.
ಡಿಆರ್ ಕಾಂಗೋದಲ್ಲಿ ಅನವಶ್ಯಕ ಯುದ್ಧವು ಎಂಫಾಕ್ಸ್ ಸೇರಿದಂತೆ ಸಾಂಕ್ರಾಮಿಕ ಕಾಯಿಲೆಗಳಿಗೆ `ಹಾಟ್ಸ್ಪಾಟ್' ಎಂದು ಗುರುತಿಸಿಕೊಂಡಿರುವ ಪ್ರದೇಶದಲ್ಲಿ ಮಾರಣಾಂತಿಕ ಸಾಂಕ್ರಾಮಿಕ ರೋಗದ ಅಪಾಯವನ್ನು ಹೆಚ್ಚಿಸಿದೆ ಎಂದು ಆಫ್ರಿಕಾದ ಆರೋಗ್ಯ ಏಜೆನ್ಸಿ ಎಚ್ಚರಿಸಿದೆ. ದೇಶದಲ್ಲಿ ಹೇರಳವಾಗಿರುವ ಖನಿಜ ಸಂಪನ್ಮೂಲದ ಲಾಭ ಪಡೆಯಲು ರುವಾಂಡಾ ಯುದ್ಧ ಸಾರಿದೆ ಎಂದು ಡಿಆರ್ ಕಾಂಗೋ ಆರೋಪಿಸಿದೆ.
ರುವಾಂಡಾವು ಪೂರ್ವ ಕಾಂಗೋದಲ್ಲಿ ಸಾವಿರಾರು ಪಡೆಗಳನ್ನು ನಿಯೋಜಿಸಿದ್ದು ಎಂ23 ಬಂಡುಕೋರ ಗುಂಪಿನ ಮೇಲೆ ವಸ್ತುಶಃ ನಿಯಂತ್ರಣ ಹೊಂದಿದೆ ಎಂದು ಜುಲೈಯಲ್ಲಿ ವಿಶ್ವಸಂಸ್ಥೆಯ ತಜ್ಞರ ವರದಿಯಲ್ಲಿ ಉಲ್ಲೇಖಿಸಲಾಗಿದೆ.