ಕಾಂಗೋದ ಗೋಮ ನಗರ ಬಂಡುಕೋರ ಗುಂಪಿನ ವಶಕ್ಕೆ | ಸಂಘರ್ಷದಲ್ಲಿ 13 ಶಾಂತಿಪಾಲನಾ ಯೋಧರು ಮೃತ್ಯು
ಬಂಡುಕೋರ ಗುಂಪಿಗೆ ರವಾಂಡಾ ಬೆಂಬಲ: ವರದಿ

PC | Moses Sawasawa/AP Photo
ಕಿನ್ಶಾಸ : ಕಾಂಗೋ ಗಣರಾಜ್ಯದಲ್ಲಿ ಸಂಘರ್ಷ ತಾರಕಕ್ಕೆ ಏರಿದ್ದು ರವಾಂಡಾ ದೇಶದ ಬೆಂಬಲದೊಂದಿಗೆ ಸಶಸ್ತ್ರ ಬಂಡುಕೋರರ ಗುಂಪು (ಎಂ23) ಗೋಮ ನಗರವನ್ನು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ.
ರವಿವಾರ ಬಂಡುಕೋರ ಪಡೆ ನಡೆಸಿದ ಕ್ಷಿಪ್ರ ದಾಳಿಯಿಂದ ಕಂಗೆಟ್ಟ ಕಾಂಗೋ ಸೇನೆ ಗೋಮ ನಗರದಿಂದ ಹಿಂದೆ ಸರಿದಿದೆ ಎಂದು ಸ್ಥಳೀಯರು ಹೇಳಿದ್ದು ನಗರದ ಪ್ರಮುಖ ರಸ್ತೆಯಲ್ಲಿ ಬಂಡುಕೋರ ಪಡೆ ಗಸ್ತು ತಿರುಗುತ್ತಿರುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮಧ್ಯೆ, ಸಾವಿರಾರು ಜನರು ನೆರೆಯ ಗ್ರಾಮಗಳಿಗೆ ಪಲಾಯನ ಮಾಡಿದ್ದಾರೆ. ಗಂಟೆಗಳ ಕಾಲ ಗುಂಡಿನ ದಾಳಿ ಮತ್ತು ಸ್ಫೋಟಗಳಿಗೆ ಸಾಕ್ಷಿಯಾಗಿದ್ದ ಗಾಮಾದ ರಸ್ತೆಗಳು ಈಗ ಮೌನವಾಗಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಈ ಮಧ್ಯೆ, ಎಂ23 ಬಂಡುಕೋರರನ್ನು ಬೆಂಬಲಿಸಲು ನೆರೆಯ ರವಾಂಡಾ ದೇಶ ತನ್ನ ಸೈನ್ಯವನ್ನು ಗಡಿಭಾಗದ ನಗರಗಳಿಗೆ ರವಾನಿಸುವ ಮೂಲಕ ಯುದ್ಧ ಸಾರಿದೆ ಎಂದು ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ (ಡಿಆರ್ ಕಾಂಗೊ) ವಿದೇಶಾಂಗ ಸಚಿವರು ಆರೋಪಿಸಿದ್ದಾರೆ. ಬಂಡುಕೋರ ಪಡೆಯನ್ನು ಬೆಂಬಲಿಸುತ್ತಿರುವುದನ್ನು ರವಾಂಡಾ ನಿರಾಕರಿಸಿಲ್ಲ ಮತ್ತು ರವಾಂಡಾದಲ್ಲಿ ಸರಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿರುವ ಸಶಸ್ತ್ರ ಹೋರಾಟಗಾರರಿಗೆ ಕಾಂಗೋ ಸಹಾಯ ಮಾಡುತ್ತಿದೆ ಎಂದು ಆರೋಪಿಸಿದೆ.
ತಕ್ಷಣ ಕದನ ವಿರಾಮ ಜಾರಿಗೆ ಕೆನ್ಯಾ ಆಗ್ರಹಿಸಿದ್ದು ಮುಂದಿನ ಎರಡು ದಿನಗಳೊಳಗೆ ನಡೆಯುವ ತುರ್ತು ಪ್ರಾದೇಶಿಕ ಶೃಂಗಸಭೆಯಲ್ಲಿ ಡಿಆರ್ ಕಾಂಗೋ ಮತ್ತು ರವಾಂಡಾ ಪಾಲ್ಗೊಳ್ಳಲಿದೆ. ಘರ್ಷಣೆಗೆ ಶಾಂತಿಯುತ ಪರಿಹಾರವನ್ನು ಕಂಡುಕೊಳ್ಳಲು ಸಹಾಯ ಮಾಡುವುದು ಪ್ರಾದೇಶಿಕ ನಾಯಕರ ಜವಾಬ್ದಾರಿಯಾಗಿದೆ ಎಂದು ಕೆನ್ಯಾ ಅಧ್ಯಕ್ಷ ಹಾಗೂ ಪೂರ್ವ ಆಫ್ರಿಕಾ ದೇಶಗಳ ಒಕ್ಕೂಟದ ಅಧ್ಯಕ್ಷ ವಿಲಿಯಂ ರೂಟೊ ಹೇಳಿದ್ದಾರೆ.
ಖನಿಜ ಸಮೃದ್ಧ ಪೂರ್ವ ಡಿಆರ್ ಕಾಂಗೋದ ವಿಶಾಲ ಭಾಗಗಳು 2021ರಿಂದ ಎಂ23 ಬಂಡುಕೋರರ ಗುಂಪಿನ ವಶದಲ್ಲಿದೆ. ಕಳೆದ ಕೆಲ ವಾರಗಳಿಂದ ನಡೆಯುತ್ತಿರುವ ತೀವ್ರ ಹೋರಾಟದ ಬಳಿಕ ಗೋಮ ನಗರದಲ್ಲಿ ಬಂಡುಕೋರ ಪಡೆ ಕ್ಷಿಪ್ರ ಮುನ್ನಡೆ ಸಾಧಿಸಿದೆ. 2025ರ ಆರಂಭದಿಂದ ರವಾಂಡಾ ಗಡಿಭಾಗದ ಉತ್ತರ ಮತ್ತು ದಕ್ಷಿಣ ಕಿವು ಪ್ರಾಂತಗಳಿಂದ 4 ಲಕ್ಷಕ್ಕೂ ಹೆಚ್ಚು ಮಂದಿ ಮನೆಯಿಂದ ಪಲಾಯನ ಮಾಡಿದ್ದಾರೆ ಎಂದು ನಿರಾಶ್ರಿತರಿಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಏಜೆನ್ಸಿ ಹೇಳಿದೆ. ಗೋಮ ಸುತ್ತಮುತ್ತಲಿನ ಪ್ರಮುಖ ರಸ್ತೆಗಳನ್ನು ತಡೆಯಲಾಗಿದೆ ಮತ್ತು ನಗರದ ವಿಮಾನ ನಿಲ್ದಾಣದ ಕಾರ್ಯಾಚರಣೆ ಸ್ಥಗಿತಗೊಂಡಿದ್ದು ತೆರವು ಮತ್ತು ಮಾನವೀಯ ನೆರವು ವಿತರಣೆ ಕಾರ್ಯಕ್ಕೆ ತೊಡಕಾಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವದಂತಿಗಳನ್ನು ನಂಬಬೇಡಿ. ಸೇನೆಯು ಈಗಲೂ ವಿಮಾನ ನಿಲ್ದಾಣ ಸೇರಿದಂತೆ ಗೋಮ ನಗರ ಹಾಗೂ ಉತ್ತರ ಕಿವು ಪ್ರಾಂತದ ರಾಜಧಾನಿಯ ಆಯಕಟ್ಟಿನ ಸ್ಥಳಗಳ ಮೇಲೆ ನಿಯಂತ್ರಣ ಹೊಂದಿದೆ. ತಾಯ್ನಾಡನ್ನು ಯಾವುದೇ ಬೆಲೆ ತೆತ್ತಾದರೂ ರಕ್ಷಿಸಲು ಸೇನೆಯು ಕಟಿಬದ್ಧವಾಗಿದೆ ಎಂದು ಕಾಂಗೋ ಸರಕಾರ ಸೋಮವಾರ ಬೆಳಿಗ್ಗೆ ಸ್ಥಳೀಯರಿಗೆ ಸಂದೇಶ ರವಾನಿಸಿದೆ.
48 ಗಂಟೆಗಳ ಒಳಗೆ ಶಸ್ತ್ರಾಸ್ತ್ರ ಕೆಳಗಿಳಿಸಿ ಶರಣಾಗುವಂತೆ ಬಂಡುಕೋರರು ಯೋಧರಿಗೆ ವಿಧಿಸಿದ್ದ ಗಡುವು ಸೋಮವಾರ ಬೆಳಿಗ್ಗೆ ಅಂತ್ಯಗೊಂಡಿದ್ದು ಈ ಅವಧಿಯಲ್ಲಿ ಕಾಂಗೋದ ಕೆಲವು ಯೋಧರು ಶರಣಾಗಿದ್ದಾರೆ ಎಂದು ವಿಶ್ವಸಂಸ್ಥೆ ಶಾಂತಿಪಾಲನಾ ಪಡೆ ಹೇಳಿದೆ. ಡಿಆರ್ ಕಾಂಗೋದ ಭೂಪ್ರದೇಶದಿಂದ ತನ್ನ ಪಡೆಗಳನ್ನು ತಕ್ಷಣ ಹಿಂಪಡೆಯುವಂತೆ ಮತ್ತು ಕಾಂಗೋದ ಬಂಡುಕೋರ ಗುಂಪಿಗೆ ಬೆಂಬಲ ನಿಲ್ಲಿಸುವಂತೆ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ರವಾಂಡಾವನ್ನು ಆಗ್ರಹಿಸಿದ್ದು ಬಂಡುಕೋರ ಪಡೆಗೂ ಎಚ್ಚರಿಕೆ ನೀಡಿದ್ದಾರೆ. ಈ ಮಧ್ಯೆ, ಶಾಂತಿಪಾಲನಾ ಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 13 ಯೋಧರು ಬಂಡುಕೋರ ಗುಂಪಿನ ದಾಳಿಯಲ್ಲಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಅನಿವಾರ್ಯವಲ್ಲದ ಸಿಬ್ಬಂದಿಗಳನ್ನು ಗೋಮ ನಗರದಿಂದ ವಾಪಾಸು ಕರೆಸಿಕೊಳ್ಳುವುದಾಗಿ ವಿಶ್ವಸಂಸ್ಥೆ ಹೇಳಿದೆ.
►ಜೈಲಿಗೆ ಬೆಂಕಿ: ನೂರಾರು ಕೈದಿಗಳ ಪಲಾಯನ
ಡಿಆರ್ ಕಾಂಗೋದ ಗೋಮ ನಗರದಲ್ಲಿ ಕ್ಷಿಪ್ರಗತಿಯಲ್ಲಿ ಮುನ್ನಡೆ ಸಾಧಿಸುತ್ತಿರುವ ಬಂಡುಕೋರ ಪಡೆ ನಗರದಲ್ಲಿರುವ ಬೃಹತ್ ಜೈಲಿನ ಮೇಲೆ ದಾಳಿ ನಡೆಸಿದ್ದು ಬೆಂಕಿ ಹಚ್ಚಿದೆ. ಈ ಗೊಂದಲದ ಲಾಭ ಪಡೆದು ನೂರಾರು ಕೈದಿಗಳು ಜೈಲಿನಿಂದ ಪಲಾಯನ ಮಾಡಿರುವುದಾಗಿ ವರದಿಯಾಗಿದೆ.
ಸುಮಾರು 3000 ಕೈದಿಗಳನ್ನು ಇರಿಸಿದ್ದ ಜೈಲು ಬೆಂಕಿಯಿಂದ ಸಂಪೂರ್ಣ ಸುಟ್ಟುಹೋಗಿದ್ದು ಹಲವಾರು ಸಾವು-ನೋವು ಸಂಭವಿಸಿದೆ. ನಗರದ ಬಹುತೇಕ ಪ್ರದೇಶಗಳಿಗೆ ವಿದ್ಯುತ್ ಮತ್ತು ನೀರಿನ ಸಂಪರ್ಕ ಕಡಿತಗೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಜೈಲಿನ ಸುತ್ತಮುತ್ತಲಿನ ರಸ್ತೆಗಳಲ್ಲಿ ಕೈದಿಗಳು ಪರಾರಿಯಾಗುತ್ತಿರುವ ವೀಡಿಯೊವನ್ನು ಮಾಧ್ಯಮಗಳು ಪ್ರಸಾರ ಮಾಡಿವೆ.