ಕಾಂಗೋದ ನಿಗೂಢ ರೋಗ ಮಲೇರಿಯಾ: ಅಧಿಕಾರಿಗಳ ವರದಿ
ಸಾಂದರ್ಭಿಕ ಚಿತ್ರ
ಕಿನ್ಶಾಸ: ಕಾಂಗೋ ಗಣರಾಜ್ಯದಲ್ಲಿ 143ಕ್ಕೂ ಅಧಿಕ ಜನರ ಸಾವಿಗೆ ಕಾರಣವಾದ ಫ್ಲೂ ರೀತಿಯ ರೋಗವನ್ನು ಇದೀಗ `ಅತ್ಯಂತ ತೀವ್ರ ಸ್ವರೂಪದ ಮಲೇರಿಯಾ' ಎಂದು ಅಧಿಕೃತವಾಗಿ ಗುರುತಿಸಲಾಗಿದೆ.
ಈ ರೋಗದ ಬಗ್ಗೆ ನಿಗೂಢತೆ ಇದ್ದ ಕಾರಣ ಆರಂಭದಲ್ಲಿ ಇದನ್ನು `ಎಕ್ಸ್ ರೋಗ'ವೆಂದು ಹೆಸರಿಸಲಾಗಿತ್ತು. ಪ್ರಧಾನವಾಗಿ ಮಹಿಳೆಯರು ಮತ್ತು ಮಕ್ಕಳ ಮೇಲೆ ಪರಿಣಾಮ ಬೀರುವ ಈ ರೋಗದಿಂದ 600ಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದ್ದು ಇದರಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದೆ.
ರಹಸ್ಯವನ್ನು ಅಂತಿಮವಾಗಿ ಪರಿಹರಿಸಲಾಗಿದೆ. ಇದು ಉಸಿರಾಟದ ಕಾಯಿಲೆಯ ರೂಪದಲ್ಲಿರುವ ತೀವ್ರ ಪ್ರಮಾಣದ ಮಲೇರಿಯಾ ಆಗಿದ್ದು ಅಪೌಷ್ಟಿಕತೆಯಿಂದ ಬಳಲುತ್ತಿರುವವರಲ್ಲಿ ಹೆಚ್ಚಾಗಿ ಕಂಡುಬಂದಿದೆ. 2024ರ ಅಕ್ಟೋಬರ್ನಿಂದ 592 ಪ್ರಕರಣ ವರದಿಯಾಗಿದ್ದು ಮರಣದ ಪ್ರಮಾಣ 6.2% ಆಗಿದೆ ಎಂದು ಕಾಂಗೋದ ಆರೋಗ್ಯ ಇಲಾಖೆ ಹೇಳಿದೆ.
ಸಾಂಕ್ರಾಮಿಕ ಅಥವಾ ಸಾಂಕ್ರಾಮಿಕ ಸಂಭಾವ್ಯತೆಯೊಂದಿಗೆ ಅಜ್ಞಾತ ರೋಗವನ್ನು ವಿವರಿಸಲು ವಿಶ್ವ ಆರೋಗ್ಯ ಸಂಸ್ಥೆ `ಎಕ್ಸ್' ಎಂಬ ಹೆಸರು ನೀಡುತ್ತದೆ. ವಿಶ್ವದಲ್ಲಿ ಅತ್ಯಧಿಕ ಮಲೇರಿಯಾ ಪ್ರಕರಣಗಳ ಸಮಸ್ಯೆ ಎದುರಿಸುತ್ತಿರುವ ದೇಶಗಳ ಪಟ್ಟಿಯಲ್ಲಿ ಕಾಂಗೋ ಗಣರಾಜ್ಯದ ಹೆಸರಿದ್ದು ಜಾಗತಿಕ ಮಲೇರಿಯಾ ಪ್ರಕರಣಗಳಲ್ಲಿ 11%ದಷ್ಟು ಕಾಂಗೋದಲ್ಲಿ ವರದಿಯಾಗಿದೆ. ಕಾಂಗೋದಿಂದ ಜಗತ್ತಿನ ಇತರ ದೇಶಗಳಿಗೂ ಮಲೇರಿಯಾ ಸೋಂಕು ಹರಡುತ್ತಿದೆ. 2023ರಲ್ಲಿ ಜಾಗತಿಕವಾಗಿ 2.63 ಕೋಟಿ ಮಲೇರಿಯಾ ಪ್ರಕರಣ ದಾಖಲಾಗಿದ್ದು 5,97,000 ಸಾವು ಸಂಭವಿಸಿದೆ. ಇದರಲ್ಲಿ ಸುಮಾರು 95%ದಷ್ಟು ಪ್ರಕರಣ ವಿಶ್ವ ಆರೋಗ್ಯ ಸಂಸ್ಥೆಯ ಆಫ್ರಿಕಾ ವಲಯದಲ್ಲಿದೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ.