ಗಾಝಾದಲ್ಲಿ ಮುಂದುವರಿದ ಸಂಘರ್ಷ
Photo:PTI
ಗಾಝಾ : ಕಳೆದ ವಾರ ಉತ್ತರ ಗಾಝಾಪಟ್ಟಿಯ ಕೆಲವು ಪ್ರದೇಶಗಳಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡಿದ್ದ ಇಸ್ರೇಲ್, ಮಂಗಳವಾರ ಮತ್ತೆ ಈ ಪ್ರದೇಶಗಳತ್ತ ತನ್ನ ಟ್ಯಾಂಕ್ಗಳನ್ನು ರವಾನಿಸಿದ್ದು ಸಂಘರ್ಷ ತೀವ್ರಗೊಂಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಗಾಝಾದ ಉತ್ತರದಲ್ಲಿ ಹಲವೆಡೆ ಭಾರೀ ಸ್ಫೋಟಗಳು ಕೇಳಿ ಬಂದಿವೆ. ಸೋಮವಾರ ರಾತ್ರಿಯಿಡೀ ಈ ಪ್ರದೇಶದ ಮೇಲೆ ಇಸ್ರೇಲ್ನ ವೈಮಾನಿಕ ದಾಳಿ ನಡೆಸಿದೆ. ಗಾಝಾ ಪಟ್ಟಿಯ ಉತ್ತರದ ತುದಿಯಲ್ಲಿರುವ ನಗರದಲ್ಲಿ ಹತ್ತಕ್ಕೂ ಅಧಿಕ ಹಮಾಸ್ ಹೋರಾಟಗಾರರನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ಭದ್ರತಾ ಪಡೆ ಹೇಳಿದೆ.
ಮಂಗಳವಾರ ಬೆಳಗ್ಗಿನವರೆಗಿನ ಕಳೆದ 24 ಗಂಟೆಗಳ ಅವಧಿಯಲ್ಲಿ ಗಾಝಾ ಪ್ರದೇಶದಲ್ಲಿ ಇಸ್ರೇಲ್ನ ದಾಳಿಯಲ್ಲಿ 158 ಮಂದಿ ಸಾವನ್ನಪ್ಪಿದ್ದು ಇದರೊಂದಿಗೆ ಅಕ್ಟೋಬರ್ 7ರ ಬಳಿಕ ಗಾಝಾದಲ್ಲಿ ಮೃತಪಟ್ಟವರ ಸಂಖ್ಯೆ 24,285ಕ್ಕೆ ತಲುಪಿದೆ. ಹಲವೆಡೆ ನೆಲಸಮಗೊಂಡಿರುವ ಕಟ್ಟಡಗಳ ಅವಶೇಷಗಳಡಿ ಇನ್ನಷ್ಟು ಮೃತದೇಹಗಳಿರುವ ಶಂಕೆಯಿದೆ ಎಂದು ಗಾಝಾದ ಆರೋಗ್ಯ ಇಲಾಖೆ ಹೇಳಿದೆ.