ಗಾಝಾ, ರಫಾದ ಮೇಲೆ ಮುಂದುವರಿದ ಇಸ್ರೇಲ್ ದಾಳಿ : ಕನಿಷ್ಟ 11 ಮಂದಿ ಮೃತ್ಯು
PC : PTI
ಗಾಝಾ : ಇಸ್ರೇಲ್ ಪಡೆಗಳು ಬುಧವಾರ ಕೇಂದ್ರ ಗಾಝಾ ಪಟ್ಟಿಯ ಮೇಲೆ ವೈಮಾನಿಕ ದಾಳಿ ಮುಂದುವರಿಸಿದ್ದು ಕನಿಷ್ಟ 11 ಫೆಲೆಸ್ತೀನೀಯರು ಸಾವನ್ನಪ್ಪಿರುವುದಾಗಿ ಗಾಝಾದ ಆರೋಗ್ಯ ಇಲಾಖೆ ಹೇಳಿದೆ.
ಈ ಮಧ್ಯೆ, ಇಸ್ರೇಲ್ ನ ಟ್ಯಾಂಕ್ ಗಳು ದಕ್ಷಿಣ ಗಾಝಾದ ರಫಾ ನಗರದತ್ತ ಮುಂದುವರಿದಿದೆ. ಕೇಂದ್ರ ಗಾಝಾ ಪಟ್ಟಿಯ ಅಲ್ ಜವೈದ ಪ್ರದೇಶದ ಮನೆಯೊಂದರ ಮೇಲೆ ಮಂಗಳವಾರ ರಾತ್ರಿ ನಡೆದ ಕ್ಷಿಪಣಿ ದಾಳಿಯಲ್ಲಿ 8 ಮಂದಿ ಮೃತಪಟ್ಟಿದ್ದಾರೆ. ನುಸೀರಾತ್ ನಿರಾಶ್ರಿತರ ಶಿಬಿರದ ಮೇಲೆ ನಡೆದ ದಾಳಿಯಲ್ಲಿ ಓರ್ವ ಸಾವನ್ನಪ್ಪಿದ್ದಾನೆ. ಅಲ್-ಬುರೇಜಿ ಮತ್ತು ಅಲ್-ಮಗಾಝಿ ಶಿಬಿರಗಳ ಮೇಲೆ ಇಸ್ರೇಲ್ ಟ್ಯಾಂಕ್ ಗಳು ಶೆಲ್ ದಾಳಿ ನಡೆಸಿವೆ. ಈ ಪ್ರದೇಶದಲ್ಲಿ ಇಸ್ರೇಲ್ ನ ವೈಮಾನಿಕ ದಾಳಿಯಲ್ಲಿ ಮಸೀದಿಯೊಂದು ಧ್ವಂಸಗೊಂಡಿದೆ. ರಫಾ ನಗರದಲ್ಲಿ ಹಲವು ಮನೆಗಳನ್ನು ಧ್ವಂಸಗೊಳಿಸಲಾಗಿದ್ದು ಶೆಲ್ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ರಫಾ ಪ್ರದೇಶದಲ್ಲಿ ಪಡೆಗಳು ಗುಪ್ತಚರ ವರದಿ ಆಧಾರಿತ ನಿಖರ ದಾಳಿಯನ್ನು ಮುಂದುವರಿಸಿವೆ. ಗಾಝಾ ಪಟ್ಟಿಯಲ್ಲಿ ಮಂಗಳವಾರ ರಾತ್ರಿಯಿಂದ ಮುಂದುವರಿದಿರುವ ದಾಳಿಯಲ್ಲಿ ಹಮಾಸ್ನ 25 ನೆಲೆಗಳಿಗೆ ಹಾನಿಯಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದೆ. ಈ ಮಧ್ಯೆ, ಗಾಝಾದಲ್ಲಿ ಮಿಲಿಟರಿ ಆಕ್ರಮಣದ ಸಂದರ್ಭ ಬಂಧಿಸಲಾಗಿದ್ದ 13 ಫೆಲೆಸ್ತೀನೀಯರನ್ನು ಇಸ್ರೇಲ್ ಬುಧವಾರ ಬಿಡುಗಡೆಗೊಳಿಸಿದ್ದು ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಫೆಲೆಸ್ತೀನ್ ರೆಡ್ಕ್ರೆಸೆಂಟ್ ಹೇಳಿದೆ.