ಗಡಿ ಸ್ಥಿರತೆ ನಿರ್ವಹಿಸಲು ಸಹಕರಿಸಿ: ಮ್ಯಾನ್ಮಾರ್ ಗೆ ಚೀನಾ ಆಗ್ರಹ
Photo : PTI
ಬೀಜಿಂಗ್: ಗಡಿಭಾಗದಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಲು ಮ್ಯಾನ್ಮಾರ್ ನ ಸೇನಾಡಳಿತ ಸಹಕರಿಸಬೇಕು ಎಂದು ಚೀನಾ ಸೋಮವಾರ ಆಗ್ರಹಿಸಿದೆ.
ಚೀನಾ-ಮ್ಯಾನ್ಮಾರ್ ಗಡಿಭಾಗದಲ್ಲಿ ಬಿಕ್ಕಟ್ಟು ಉಲ್ಬಣಿಸಿರುವ ಹಿನ್ನೆಲೆಯಲ್ಲಿ ಚೀನಾದ ಸಹಾಯಕ ವಿದೇಶಾಂಗ ಸಚಿವ ನಾಂಗ್ ರೊಂಗ್ ಶುಕ್ರವಾರದಿಂದ ರವಿವಾರದವರೆಗೆ ಮ್ಯಾನ್ಮಾರ್ ಗೆ ಭೇಟಿ ನೀಡಿ ಉಪಪ್ರಧಾನಿ ಮತ್ತು ವಿದೇಶಾಂಗ ಸಚಿವ ಥಾನ್ ಶ್ವೆ, ಸಹಾಯಕ ವಿದೇಶಾಂಗ ಸಚಿವ ಲ್ವಿನ್ ಊ ಸೇರಿದಂತೆ ಹಿರಿಯ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ ಬಳಿಕ ಚೀನಾ ಈ ಹೇಳಿಕೆ ನೀಡಿದೆ. ಮ್ಯಾನ್ಮಾರ್ ನಲ್ಲಿ ಸೇನಾಡಳಿತದ ವಿರುದ್ಧ ಹೋರಾಟ ನಡೆಸುತ್ತಿರುವ ಸಶಸ್ತ್ರ ಹೋರಾಟಗಾರರ ಗುಂಪು ಗಡಿಭಾಗದಲ್ಲಿ ಚೀನಾಕ್ಕೆ ಸೇರಿದ ಪ್ರದೇಶದಲ್ಲಿರುವ ಪ್ರಮುಖ ಹೊರಠಾಣೆಯನ್ನು ವಶಪಡಿಸಿಕೊಂಡಿದೆ. ಇದರಿಂದ ಆ ಪ್ರದೇಶದ ಸುಮಾರು 23,000 ಮಂದಿ ಸುರಕ್ಷಿತ ಪ್ರದೇಶಕ್ಕೆ ಪಲಾಯನ ಮಾಡಿದ್ದಾರೆ ಎಂದು ವಿಶ್ವಸಂಸ್ಥೆ ಮಾಹಿತಿ ನೀಡಿದೆ. ಇಲ್ಲಿ ಚೀನಾದ `ಬೆಲ್ಟ್ ಆ್ಯಂಡ್ ರೋಡ್' ಯೋಜನೆಯ ಭಾಗವಾದ ರೈಲುಹಳಿ ಹಾದುಹೋಗುತ್ತಿದ್ದು ಈ ಯೋಜನೆಯ ಕಾಮಗಾರಿಗೆ ತೊಡಕಾಗಿದೆ. ಈ ಹಿನ್ನೆಲೆಯಲ್ಲಿ ತಕ್ಷಣ ಕದನ ವಿರಾಮ ಘೋಷಿಸುವಂತೆ ಚೀನಾವು ಮ್ಯಾನ್ಮಾರ್ ಸೇನಾಡಳಿತ ಮತ್ತು ಸಶಸ್ತ್ರ ಹೋರಾಟಗಾರರ ಗುಂಪು `ಕಚಿನ್ ಇಂಡಿಪೆಂಡೆನ್ಸ್ ಆರ್ಮಿ'ಯನ್ನು ಆಗ್ರಹಿಸಿದೆ.
`ನಿಮ್ಮೊಳಗಿನ ಭಿನ್ನಾಭಿಪ್ರಾಯಗಳು ಗಡಿ ಸ್ಥಿರತೆಗೆ ಸಮಸ್ಯೆಯಾಗಬಾರದು. ಚೀನಾದ ಗಡಿಪ್ರದೇಶದ ಜನರ ಬದುಕು ಮತ್ತು ಆಸ್ತಿಗಳ ಸುರಕ್ಷೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಮ್ಯಾನ್ಮಾರ್ ನಲ್ಲಿ ಚೀನಾದ ಸಿಬಂದಿ, ಸಂಸ್ಥೆಗಳು ಮತ್ತು ಯೋಜನೆಗಳ ಭದ್ರತೆಗಳನ್ನು ಬಲಪಡಿಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಂತೆ' ಸೇನಾಡಳಿತವನ್ನು ಆಗ್ರಹಿಸಲಾಗಿದೆ ಎಂದು ಚೀನಾ ವಿದೇಶಾಂಗ ಇಲಾಖೆ ಹೇಳಿದೆ.