ಶಿಕ್ಷೆ ವಜಾಗೊಳಿಸುವ ಟ್ರಂಪ್ ಮನವಿ ತಿರಸ್ಕರಿಸಿದ ನ್ಯಾಯಾಲಯ
ಡೊನಾಲ್ಡ್ ಟ್ರಂಪ್ | PC : PTI
ವಾಷಿಂಗ್ಟನ್ : ಅಶ್ಲೀಲ ಚಿತ್ರದ ನಟಿಗೆ ಹಣ ಪಾವತಿಸಿದ ಕ್ರಿಮಿನಲ್ ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾಗಿರುವ ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಜನವರಿ 10ರಂದು ಶಿಕ್ಷೆ ವಿಧಿಸಲಾಗುತ್ತದೆ ಎಂದು ನ್ಯಾಯಾಧೀಶರು ಶುಕ್ರವಾರ ತೀರ್ಪು ನೀಡಿದ್ದು ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ಟ್ರಂಪ್ಗೆ ಭಾರೀ ಸಂಕಷ್ಟ ಎದುರಾಗಿದೆ.
ಆದರೆ ಟ್ರಂಪ್ಗೆ ಜೈಲುಶಿಕ್ಷೆ ಅಥವಾ ಇತರ ದಂಡವನ್ನು ಎದುರಿಸುವ ಸಾಧ್ಯತೆಯಿಲ್ಲ ಎಂದು ನ್ಯಾಯಾಧೀಶ ಜುವಾನ್ ಮರ್ಚನ್ ಹೇಳಿದ್ದಾರೆ. ಟ್ರಂಪ್ಗೆ ಜೈಲುಶಿಕ್ಷೆ ವಿಧಿಸಲು ಒಲವು ಹೊಂದಿಲ್ಲ. ಬೇಷರತ್ ಬಿಡುಗಡೆ ನೀಡಲಾಗುವುದು. ಶಿಕ್ಷೆ ವಿಧಿಸುವುದರಿಂದ ಟ್ರಂಪ್ಗೆ ಮೇಲ್ಮನವಿ ಸಲ್ಲಿಸಲು ದಾರಿಯಾಗುತ್ತದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಅಂದರೆ ತೀರ್ಪಿನ ವಿರುದ್ಧ ಟ್ರಂಪ್ ಮೇಲ್ಮನವಿ ಸಲ್ಲಿಸಬೇಕಾಗುತ್ತದೆ. ನ್ಯಾಯಾಲಯದ ಆದೇಶದಂತೆ ಪ್ರಮಾಣವಚನದ ದಿನಕ್ಕಿಂತ (ಜನವರಿ 20) 10 ದಿನ ಮೊದಲು ಟ್ರಂಪ್ ನ್ಯಾಯಾಲಯದ ವಿಚಾರಣೆಗೆ ಹಾಜರಾಗಬೇಕು. ಇದು ಅಮೆರಿಕದ ಇತಿಹಾಸದಲ್ಲೇ ಅಸಾಮಾನ್ಯ ವಿದ್ಯಮಾನವಾಗಿದೆ. ಇದುವರೆಗೆ ಯಾವುದೇ ಮಾಜಿ ಅಥವಾ ಹಾಲಿ ಅಧ್ಯಕ್ಷರು ಅಪರಾಧದ ಆರೋಪ ಅಥವಾ ಶಿಕ್ಷೆಗೆ ಗುರಿಯಾಗಿಲ್ಲ. ಜನವರಿ 10ರ ವಿಚಾರಣೆಗೆ ಟ್ರಂಪ್ ವೈಯಕ್ತಿಕವಾಗಿ ಅಥವಾ ವರ್ಚುವಲ್ ವೇದಿಕೆಯ ಮೂಲಕ ಹಾಜರಾಗಬಹುದು ಎಂದು ನ್ಯಾಯಾಲಯ ಹೇಳಿದೆ.
ಶಿಕ್ಷೆಯನ್ನು ರದ್ದುಗೊಳಿಸಬೇಕು ಎಂದು ಕೋರಿ ಟ್ರಂಪ್ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ ನ್ಯಾಯಾಲಯ `ಅರ್ಜಿದಾರರು ಚುನಾಯಿತ ಅಧ್ಯಕ್ಷರು ಎಂಬುದು ಶಿಕ್ಷೆಯನ್ನು ರದ್ದುಗೊಳಿಸಲು ಪೂರಕ ಕ್ರಮವಾಗುವುದಿಲ್ಲ ಎಂದಿದೆ. ನ್ಯಾಯಾಲಯದ ಆದೇಶವನ್ನು ಟೀಕಿಸಿರುವ ಟ್ರಂಪ್ `ಭ್ರಷ್ಟ ನ್ಯಾಯಾಧೀಶ ಮರ್ಚನ್ ಅವರು ಕಾನೂನನ್ನು ಮುರಿಯುತ್ತಿದ್ದಾರೆ. ಮುಗಿದು ಹೋಗಿರುವ ಪ್ರಕರಣಕ್ಕೆ ತನ್ನ ದುಷ್ಕøತ್ಯ ಮತ್ತು ವಂಚನೆಯ ಮೂಲಕ ಮರುಜೀವ ನೀಡಲು ಪ್ರಯತ್ನಿಸಿದ್ದಾರೆ' ಎಂದು ಕಿಡಿಕಾರಿದ್ದಾರೆ.