ಸುನೀತಾ ವಿಲಿಯಮ್ಸ್ ಅವರನ್ನು ಕರೆತರುವ ಜವಾಬ್ದಾರಿಯನ್ನು ಎಲಾನ್ ಮಸ್ಕ್ ಗೆ ವಹಿಸಿದ ಟ್ರಂಪ್
ಬೈಡನ್ ಸರಕಾರ ಗಗನಯಾತ್ರಿಗಳನ್ನು ಕೈಬಿಟ್ಟಿತ್ತು ಎಂದ ಅಮೆರಿಕ ಅಧ್ಯಕ್ಷ

ಡೊನಾಲ್ಡ್ ಟ್ರಂಪ್ , ಎಲಾನ್ ಮಸ್ಕ್ ,
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಾಸಾ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ (ISS) ಮರಳಿ ಕರೆತರುವ ಜವಾಬ್ದಾರಿಯನ್ನು ಟೆಕ್ ದೈತ್ಯ ಎಲಾನ್ ಮಸ್ಕ್ ಅವರ ಸ್ಪೇಸ್ಎಕ್ಸ್ಗೆ ವಹಿಸಿದ್ದಾರೆ. ಜೋ ಬೈಡನ್ ಆಡಳಿತವು ಗಗನಯಾತ್ರಿಗಳನ್ನು ಕೈಬಿಟ್ಟಿತ್ತು ಎಂದು ಆರೋಪಿಸಿದ್ದಾರೆ.
10 ದಿನಗಳ ಕಾರ್ಯಾಚರಣೆಗೆ ತೆರಳಿದ್ದ ಸುನೀತಾ ವಿಲಿಯಮ್ಸ್ (59) ಮತ್ತು ವಿಲ್ಮೋರ್ (62) ಜೂನ್ 2024 ರಿಂದ ಏಳು ತಿಂಗಳಿಂದಲ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ.
ತಮ್ಮ ಟ್ರುತ್ ಸೋಶಿಯಲ್ ಪ್ಲಾಟ್ಫಾರ್ಮ್ನ ಪೋಸ್ಟ್ನಲ್ಲಿ, ಟ್ರಂಪ್ ಅವರು ಬೈಡನ್ ಆಡಳಿತವು ಬಾಹ್ಯಾಕಾಶದಲ್ಲಿ ಕೈಬಿಟ್ಟ ಇಬ್ಬರು ಧೈರ್ಯಶಾಲಿ ಗಗನಯಾತ್ರಿಗಳನ್ನು ಹೋಗಿ ಕರೆದುಕೊಂಡು ಬನ್ನಿ ಎಂದು ಮಸ್ಕ್ ಅವರನ್ನು ಕೇಳಿಕೊಂಡಿದ್ದಾರೆ.
"ಗಗನಯಾತ್ರಿಗಳು ಬಾಹ್ಯಾಕಾಶ ನಿಲ್ದಾಣದಲ್ಲಿ ಹಲವು ತಿಂಗಳುಗಳಿಂದ ಕಾಯುತ್ತಿದ್ದಾರೆ. ಎಲಾನ್ ಮಸ್ಕ್ ಶೀಘ್ರದಲ್ಲೇ ಎಲ್ಲರನ್ನೂ ಸುರಕ್ಷಿತವಾಗಿ ಕರೆತರಲಿದ್ದಾರೆ. ಎಲಾನ್ ಮಸ್ಕ್ ಗೆ ಶುಭವಾಗಲಿ," ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ತಮ್ಮ ಪೋಸ್ಟ್ ನಲ್ಲಿ ಹೇಳಿದ್ದಾರೆ.
ಈ ಬೆಳವಣಿಗೆಯನ್ನು ದೃಢಪಡಿಸಿದ ಇಲಾನ್ ಮಸ್ಕ್ ಅಧ್ಯಕ್ಷರು ಸ್ಪೇಸ್ಎಕ್ಸ್ ಗಗನಯಾತ್ರಿಗಳನ್ನು ಸಾಧ್ಯವಾದಷ್ಟು ಬೇಗ ವಾಪಸ್ ಕರೆತರುವಂತೆ ಕೇಳಿಕೊಂಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.