ಹವಾಮಾನ ವೈಪರೀತ್ಯದಿಂದ ಹಾನಿ : ಅಭಿವೃದ್ಧಿ ಹೊಂದಿದ ದೇಶಗಳಿಗೆ ‘ನಷ್ಟ,ಹಾನಿ ಪರಿಹಾರ ನಿಧಿ’
ದುಬೈ ಸಿಓಪಿ28 ಸಮಾವೇಶದಲ್ಲಿ ಘೋಷಣೆ
ದುಬೈ, : ಜಾಗತಿಕ ತಾಪಮಾನದಿಂದಾಗಿ ಸಂಭವಿಸಿದ ಪ್ರಾಕೃತಿಕವಿಕೋಪಗಳಿಂದ ತತ್ತರಿಸಿರುವ ದುರ್ಬಲ ದೇಶಗಳು ದೀರ್ಘಸಮಯದಿಂದ ಆಗ್ರಹಿಸುತ್ತಿರುವ ‘ನಷ್ಟ ಹಾಗೂ ಹಾನಿ’ ನಿಧಿಗೆ ದುಬೈಯಲ್ಲಿ ಗುರುವಾರ ಆರಂಭಗೊಂಡ ಸಿಓಪಿ28 ಹವಾಮಾನ ಸಮಾವೇಶದಲ್ಲಿ ಚಾಲನೆ ನೀಡಲಾಯಿತು.
ಯುಎಇನ ಸಿಓಪಿ28 ಸಮಾವೇಶದ ಅಧ್ಯಕ್ಷ ಸುಲ್ತಾನ್ ಅಲ್ ಜಬೇರ್ ಅವರು ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡುತ್ತಾ, ಈ ನಿಧಿಯನ್ನು ಆರಂಭಿಸುವ ಮೂಲಕ ನಾವು ಇತಿಹಾಸವನ್ನು ಸೃಷ್ಟಿಸಿದ್ದೇವೆ ಎಂದರು. ತನ್ನ ದೇಶವು ನಿಧಿಗೆ 100 ಮಿಲಿಯ ಡಾಲರ್ಗಳನ್ನು ದೇಣಿಗೆಯಾಗಿ ನೀಡಲಿದೆಯೆಂದು ಅವರು ಘೋಷಿಸಿದರು.
ಜರ್ಮನಿ ಕೂಡಾ ಪ್ರಾಕೃತಿಕ ವಿಕೋಪದ ‘ನಷ್ಟ ಹಾಗೂ ಹಾನಿ’ನಿಧಿಗೆ 100 ಮಿಲಿಯ ಡಾಲರ್ಗಳ ದೇಣಿಗೆಯ ವಾಗ್ದಾನ ನೀಡಿದೆ. ಈ ವಿಷಯವಾಗಿ ಹಲವು ವರ್ಷಗಳಿಂದ ವಿಳಂಬ ನೀತಿಯನ್ನು ಅನುಸರಿಸುತ್ತಿದ ಶ್ರೀಮಂತ ರಾಷ್ಟ್ರಗಳು, ಕಳೆದ ವರ್ಷ ಶರ್ಮ್ ಅಲ್ ಶೇಕ್ನಲ್ಲಿ ನಡೆದ ಸಿಓಪಿ 27 ಶೃಂಗಸಭೆಯಲ್ಲಿ ನಿಧಿ ಸ್ಥಾಪನೆಗೆ ಸಂಬಂಧಿಸಿದಂತೆ ಐತಿಹಾಸಿಕ ಒಡಂಬಡಿಕೆಯನ್ನು ಏರ್ಪಡಿಸಿದ್ದವು.
ಈ ನಿಧಿಯನ್ನು ಮಧ್ಯಂತರದ ಆಧಾರದಲ್ಲಿ ವಿಶ್ವಬ್ಯಾಂಕ್ನಲ್ಲಿ ಇರಿಸುವ ಬಗ್ಗೆಯೂ ನಿರ್ಧಾರವನ್ನು ಕೈಗೊಳ್ಳಲಾಯಿತು.